ತಮಿಳುನಾಡು, ನ.09 (DaijiworldNews/PY): ಅಮೇರಿಕಾದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಾಲಾ ಹ್ಯಾರಿಸ್ ಅವರ ಪೂರ್ವಿಕರ ಊರುಗಳಲ್ಲಿ ಭಾನುವಾರದಂದು ದೀಪಾವಳಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಅಮೇರಿಕಾದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರ ಅಜ್ಜ ಅಜ್ಜಿಯ ಊರಾದ ತುಳಸೇಂದ್ರಪುರಂ ಮತ್ತು ಪೈಂಗನಾಡು ಗ್ರಾಮಗಳ ಜನರು ತಮ್ಮ ಮನೆ ಮಗಳು ವಿಜಯಶಾಲಿಯಾಗಿದ್ದಾಳೆ ಎಂದು ಸಂಭ್ರಮಾಚರಿಸಿದ್ದಾರೆ.
ಮತದಾನ ಆರಂಭವಾಗುವ ಮುನ್ನ ಗ್ರಾಮಸ್ಥರು ಕಮಲಾ ಅವರ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ನು ತಮಿಳುನಾಡಿನ ಆಹಾರ ಸಚಿವ ಆರ್.ಕಾಮರಾಜ್ ಅವರು ಸೇರಿದಂತೆ ವಿವಿಧ ಪಕ್ಷಗಳ ರಾಜಕಾರಣಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಕಮಲಾ ಹ್ಯಾರಿಸ್ ಅವರ ಅಜ್ಜ ಪಿ.ವಿ.ಗೋಪಾಲನ್ ಅವರು ಯುವಕರಾಗಿದ್ದಾಗ ತುಳಸೇಂದ್ರಪುರಂ ಅನ್ನು ತೊರೆದುಹೋಗಿದ್ದರು. ಬಳಿಕ ಅವರು ಬ್ರಿಟಿಷ್ ಸರ್ಕಾರದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಮಲಾ ಅವರ ಅಜ್ಜಿ ರಾಜಮ್ ಅವರು ಪೈಂಗನಾಡು ಗ್ರಾಮದವರಾಗಿದ್ದಾರೆ. ಕಮಲಾ ಹ್ಯಾರಿಸ್ ಅವರ ಪೂರ್ವಿಕರು ಊರು ತೊರೆದಿದ್ದರೂ ಕೂಡಾ, ಗ್ರಾಮಸ್ಥರು ಮಾತ್ರ ಆ ಕುಟುಂಬದ ನಂಟನ್ನು ಮರೆತಿಲ್ಲ.