ನವದೆಹಲಿ, ನ.09 (DaijiworldNews/HR): ಈ ಬಾರಿಯ ದೀಪಾವಳಿ ಸಮಯದಲ್ಲಿ ಪಟಾಕಿ ಮಾರಾಟಕ್ಕೆ ನೀಡಲಾಗಿದ್ದ ಎಲ್ಲಾ ತಾತ್ಕಾಲಿಕ ಪರವಾನಗಿಗಳನ್ನು ರದ್ದುಗೊಳಿಸುವಂತೆ ದೆಹಲಿ ಪೊಲೀಸರು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ.
ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಈ ಬಾರಿ ಪಟಾಕಿ ಮಾರಾಟ ಮತ್ತು ಬಳಕೆಗೆ ದೆಹಲಿ ಸರ್ಕಾರ ನಿಷೇಧ ಏರಿದೆ. ಈ ಹಿನ್ನಲೆಯಲ್ಲಿ ನಿರ್ದೇಶನ ನೀಡಲಾಗಿದೆ.
ನ. 6ರಂದು ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ನೀಡಿರುವ ನಿರ್ದೇಶದಂತೆ ಎಲ್ಲ ರೀತಿಯ ಪಟಾಕಿ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಸುತ್ತೋಲೆ ಹೊರಡಿಸಲಾಗಿದೆ. ಈ ಕ್ರಮವನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಇನ್ನುಅಕ್ರಮವಾಗಿ ಪಟಾಕಿ ಮಾರಾಟ ಮಾಡಿದ ಆರೋಪದಡಿಯಲ್ಲಿ 7 ಜನರನ್ನು ಬಂಧಿಸಲಾಗಿದ್ದು, ಸುಮಾರು 600 ಕೆಜಿಯಷ್ಟು ಪಟಾಕಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಅನಿಲ್ ಮಿತ್ತಲ್ ತಿಳಿಸಿದ್ದಾರೆ.