ಬೆಂಗಳೂರು, ನ.09 (DaijiworldNews/HR): ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ನಾಯಕತ್ವದ ಬಗ್ಗೆ ಅನಗತ್ಯ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸಬಾರದು ಎಂದು ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಮಿತಿ ಅಧ್ಯಕ್ಷ ಕೆ.ರೆಹ್ಮಾನ್ ಖಾನ್, ಶಾಸಕಾಂಗ ಪಕ್ಷದ ನಾಯಕತ್ವದ ಭವಿಷ್ಯದ ಕುರಿತು ನಾಯಕರು ಹೇಳಿಕೆ ನೀಡಿರುವುದನ್ನು ಗಮನಿಸಿದ್ದು, ಇಂತಹ ಹೇಳಿಕೆ ನೀಡಬಾರದು. ಪಕ್ಷದ ಏಕತೆಯ ದೃಷ್ಟಿಯಿಂದ ಎಲ್ಲ ಚುನಾಯಿತ ಪ್ರತಿನಿಧಿಗಳು, ಪಕ್ಷದ ನಾಯಕರು, ಕಾರ್ಯಕರ್ತರು ಈ ಬಗೆಗಿನ ಹೇಳಿಕೆಗಳಿಂದ ದೂರ ಇದ್ದು, ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದರು.
ಇನ್ನು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ರಾಜ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.