ಬಾಗಲಕೋಟೆ, ನ.09 (DaijiworldNews/HR): ಮಾಜಿ ಸಚಿವೆ, ನಟಿ ಉಮಾಶ್ರೀ ಅವರ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ತೇರದಾಳ ಪೊಲೀಸರು ಬಂಧಿಸಿದ್ದಾರೆ.
ಜಮಖಂಡಿಯ ಯಲ್ಲಪ್ಪ ಗಡ್ಡಿ ಹಾಗೂ ಮುಧೋಳದ ದುರ್ಗಪ್ಪ ವಾಲ್ಮೀಕಿ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳಿಂದ 1.94 ಲಕ್ಷ ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರಲ್ಲಿ ಓರ್ವ ಬಂಧಿತ ಆರೋಪಿ ಯಲ್ಲಪ್ಪ ಗಡ್ಡಿ ಕುಖ್ಯಾತ ಕಳ್ಳನೆಂದು ಪೊಲೀಸರು ತಿಳಿಸಿದ್ದಾರೆ.
ಬಾಗಲಕೋಟೆಯ ರಬಕವಿಯ ವಿದ್ಯಾನಗರದಲ್ಲಿರುವ ಉಮಾಶ್ರೀಯವರ ಮನೆಯಲ್ಲಿ ನವೆಂಬರ್ 2 ರಂದು ಕಳ್ಳತನವಾಗಿದ್ದು, ಮನೆಯಲ್ಲಿದ್ದ 2 ಲಕ್ಷ ರೂಪಾಯಿ ನಗದು ಎಗರಿಸಿ ಪರಾರಿಯಾಗಿದ್ದರು. ಈ ಬಗ್ಗೆ ತೇರದಾಳ ಪೊಲೀಸ್ ಠಾಣೆಗೆ ಉಮಾಶ್ರೀ ದೂರು ಕೊಟ್ಟಿದ್ದರು.
ಕಳ್ಳತನವಾದ ಸ್ಥಳಕ್ಕೆ ಸಿಪಿಐ ಕರುಣೇಸಿಗೌಡ ಮತ್ತು ಪಿಎಸ್ಐ ವಿಜಯಕುಮಾರ ಕಾಂಬಳೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.