ವಿಜಯಪುರ, ನ. 08 (DaijiworldNews/HR): ಭೀಮಾ ತೀರದ ಮಹಾದೇವ ಭೈರಗೊಂಡ ಅವರ ಮೇಲೆ ನವೆಂಬರ್ 2 ರಂದು ನಡೆದಿದ್ದ ಗುಂಡಿನ ದಾಳಿ ಹಾಗೂ ಇಬ್ಬರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಮತ್ತೆ ನಾಲ್ವರು ಆರೋಪಗಳನ್ನು ಬಂಧಿಸಿದ್ದು, ಇದುವರೆಗೆ ಬಂಧಿತರಾಗಿರುವವರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ.
ಈ ಕುರಿತು ಮಾತನಾಡಿದ ಎಸ್ಪಿ ಅನುಪಮ್ ಅಗರ್ ವಾಲ್ , ಮಹಾದೇವ ಭೈರಗೊಂಡ ಹಾಗೂ ಸಹಚರರ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ಮಹಾದೇವ ಭೈರಗೊಂಡ ತೀವ್ರವಾಗಿ ಗಾಯಗೊಂಡು, ಆತನ ಇಬ್ಬರು ಸಹಚರರು ಗಾಯಗೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್ಪಿ ರಾಮ ಅರಸಿದ್ಧಿ ನೇತೃತ್ವದಲ್ಲಿ ರಚನೆಯಾಗಿರುವ ವಿವಿಧ ಅಧಿಕಾರಿಗಳ ತಂಡ ಮತ್ತೆ ನಾಲ್ವರು ಆರೋಪಗಳನ್ನು ಬಂಧಿಸಿದೆ ಎಂದು ತಿಳಿಸಿದರು.
ಬಂಧಿತ ಆರೋಪಿಗಳನ್ನು ವಿಜಯಪುರ ನಗರದ ರಾಜರತ್ನ ಕಾಲೋನಿಯ ಕಾಶಿನಾಥ ತಾಳೀಕೋಟೆ (23), ಬಬಲೇಶ್ವರ ತಾಲೂಕ ಸಾರವಾಡ ಗ್ರಾಮದ ಯುನೀಸ್ ಅಲಿ ಮುಜಾವರ್ (24), ವಿಜಯಪುರ ನಗರದ ಕುಂಬಾರ ಗಲ್ಲಿ ನಿವಾಸಿ ರಾಜು ಗುನ್ನಾಪುರ (27), ವಿಜಯಪುರ ತಾಲೂಕಿನ ಯೋಗಾಪುರ ನಿವಾಸಿ ಸಿದ್ದು ಮೂಡಲಗಿ (24 ) ಎಂದು ಗುರುತಿಲಾಗಿದೆ.
ಭೈರಗೊಂಡ ಅವರ ಮೇಲೆ ನವೆಂಬರ್ 2 ರಂದು ವಿಜಯಪುರ ತಾಲೂಕಿನ ಕನ್ನಾಳ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಮಹಾದೇವ ಭೈರಗೊಂಡ ಪ್ರಯಾಣಿಸುತ್ತಿದ್ದ ಕಾರಿಗೆ ಆರೋಪಿಗಳು ಟಿಪ್ಪರ್ ಮೂಲಕ ಡಿಕ್ಕಿ ಮಾಡಿ, ಬಳಿಕ ಗುಂಡಿನ ದಾಳಿ, ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಬಳಸಿದ್ದರು. ಮಹಾದೇವ ಭೈರಗೊಂಡ ದೆಹಕ್ಕೆ ಮೂರು ಗುಂಡು ಹೊಕ್ಕಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು.