ಬೆಳಗಾವಿ,ನ. 08 (DaijiworldNews/HR): ಎಲ್ಲಾ ಪಕ್ಷಗಳಲ್ಲಿಯೂ ಗುಂಪುಗಾರಿಕೆ ನಡೆಯುತ್ತಿದೆ, ಅದರಂತೆ ಬಿಜೆಪಿಯಲ್ಲಿ ಮೂರು ಗುಂಪುಗಳಿದ್ದು, ಒಂದು ಗುಂಪು ದೆಹಲಿಯಲ್ಲಿದ್ದರೆ, ಎರಡು ಗುಂಪು ಕರ್ನಾಟಕದಲ್ಲಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಕಾಂಗ್ರೆಸ್ ಪಕ್ಷದ ಸ್ಥಿತಿ ಕರ್ನಾಟಕದಲ್ಲಿ ಮನೆಯೊಂದು ಮೂರು ಬಾಗಿಲು ಆಗಿದ್ದು, ಅವನತಿಯ ಅಂಚಿನಲ್ಲಿದೆ ಎಂಬ ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಿಯೊಬ್ಬರು ತಮ್ಮ ನಾಯಕತ್ವದಲ್ಲಿ ಇರುತ್ತಾರೆ, ಆದರೆ ಪಕ್ಷ ಅಂತ ಬಂದಾಗ ಎಲ್ಲರೂ ಒಗ್ಗಟ್ಟಾಗಿಯೇ ಕೆಲಸ ಮಾಡುತ್ತಾರೆ ಎಂದರು.
ಇನ್ನು ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬುದನ್ನು ನೋಡಬೇಕಷ್ಟೇ ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ನಮಗೆ ಗೆಲ್ಲುಲು ಖಂಡಿತ ಎಂದು ಬಿಜೆಪಿ ಮುಖಂಡರು ಹೇಳಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇದೆ. ಬರುವ ದಿನಗಳಲ್ಲಿ ದೇಶ ಹಾಗೂ ಕರ್ನಾಟಕದಲ್ಲಿ ಸಾಕಷ್ಟು ಬದಲಾವಣೆ ಆಗಲಿದ್ದು, ಮುಂದೆ ಇವರೇ ಯಾವ ಪಕ್ಷದಲ್ಲಿ ಇರುತ್ತಾರೋ ಗೊತ್ತಿಲ್ಲ, ಕಾದು ನೋಡೋಣ ಎಂದು ಹೇಳಿದ್ದಾರೆ.