ಬೆಂಗಳೂರು, ನ.08 (DaijiworldNews/PY): ನೋಟ್ ಬ್ಯಾನ್ ದೂರದೃಷ್ಟಿಯಿಲ್ಲದ ನಾಯಕನೊಬ್ಬನ ಮೂರ್ಖತನದ ನಿರ್ಧಾರ ಎಂಬುದನ್ನು ಜಗತ್ತಿಗೇ ತೋರಿಸಿದ ದಿನವಿದು. ನ.8 ಭಾರತದ ಪಾಲಿಗೆ ಎಂದೆಂದಿಗೂ ಕರಾಳ ದಿನವಾಗಿ ಉಳಿಯಲಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಮೋದಿಯವರ ಸ್ವ ಪ್ರತಿಷ್ಠೆ ಮತ್ತು ಆತ್ಮರತಿಯ ಪ್ರತೀಕದ ಸಂಕೇತವಾಗಿ ದೇಶದ ಅರ್ಥ ವ್ಯವಸ್ಥೆಯನ್ನೇ ಹಾಳು ಮಾಡಿದ ನೋಟ್ ಬಂಧಿಗೆ ಇಂದು ನಾಲ್ಕನೇ ವರ್ಷ. ಕಪ್ಪುಹಣ ವಾಪಾಸ್ ತರುವ ಕಥೆ ಕಟ್ಟಿ, ನೋಟ್ ಬ್ಯಾನ್ ಜನರ ಬದುಕನ್ನೇ ಬೀದಿಗೆ ತಂದ ಮೋದಿಯವರಿಗೆ ಈ ದಿನವನ್ನು ತಮ್ಮ ಸಾಧನೆಯ ದಿನವೆಂಬಂತೆ ಆಚರಿಸಿಕೊಳ್ಳುವ ಧೈರ್ಯವಿದೆಯೇ?" ಎಂದು ಪ್ರಶ್ನಿಸಿದ್ದಾರೆ.
"ನೋಟ್ ಬ್ಯಾನ್ ದೂರದೃಷ್ಟಿಯಿಲ್ಲದ ನಾಯಕನೊಬ್ಬನ ಮೂರ್ಖತನದ ನಿರ್ಧಾರ ಎಂಬುದನ್ನು ಜಗತ್ತಿಗೇ ತೋರಿಸಿದ ದಿನವಿದು. ನ.8 ಭಾರತದ ಪಾಲಿಗೆ ಎಂದೆಂದಿಗೂ ಕರಾಳ ದಿನವಾಗಿ ಉಳಿಯಲಿದೆ. ಅಂದಹಾಗೆ, ಕಪ್ಪುಹಣ ಮರಳಿ ತರುವ ತೌಡು ಕುಟ್ಟಿ ಜನರಲ್ಲಿ ಭ್ರಮೆ ಹುಟ್ಟಿಸಿದ್ದ ಮೋದಿ, ನೋಟ್ ಬ್ಯಾನ್ ಮಾಡಿ ಒಂದೇ ಒಂದು ರೂಪಾಯಿ ಕಪ್ಪುಹಣ ತಂದ ಉದಾಹರಣೆ ತೋರಿಸಲಿ" ಎಂದಿದ್ದಾರೆ.
ಇನ್ನು ಈ ವಿಚಾರವಾಗಿ ಕಾಂಗ್ರೆಸ್ ಕೂಟಾ ಟ್ವೀಟ್ ಮಾಡಿದ್ದು, "105ಕ್ಕೂ ಹೆಚ್ಚು ಬಡ ಜನರ ಬಲಿಪಡೆದ ನೋಟ್ ಬ್ಯಾನ್ ಒಂದು 'ಕರಾಳ ದಿನ'. ಇದರಿಂದ ಅತೀವ ಮಾನಸಿಕ, ದೈಹಿಕ ನೋವು ಕಷ್ಟ ಅನುಭವಿಸಿದ ದೇಶದ ಜನ ಸಾಮಾನ್ಯರಿಗೆ ಸಿಕ್ಕಿದ್ದು ಏನು?. ನಿರುದ್ಯೋಗ, ಆರ್ಥಿಕ ಕುಸಿತ, ಬಡತನ ಹೆಚ್ಚಳ, ಜಿಡಿಪಿ ಕುಸಿತ, ಬೆಲೆ ಏರಿಕೆ, ಅಭಿವೃದ್ಧಿ ಕುಂಠಿತ, ಮುಚ್ಚಿದ ಉದ್ಯಮಗಳು" ಎಂದಿದೆ.
"ನೋಟುರದ್ದು ದುರಂತಕ್ಕೆ 4 ವರ್ಷ. ಹೇಳಿದ್ದು, ಕಪ್ಪುಹಣ, ಭಯೋತ್ಪಾದನೆ, ಖೋಟಾ ನೋಟು, ಕ್ಯಾಶ್ಲೆಸ್ ಎಕಾನಮಿ, ಲೆಸ್ ಕ್ಯಾಷ್ ಎಕಾನಮಿ, ಭ್ರಷ್ಟಾಚಾರ. ಮಾಡಿದ್ದು, ಆರ್ಥಿಕತೆ ಪಾತಾಳಕ್ಕೆ, ಹೂಡಿಕೆ, ಬೇಡಿಕೆ ಪಾತಾಳಕ್ಕೆ, ಉದ್ಯೋಗ ನಷ್ಟ, ಕಾರ್ಖಾನೆಗಳ ಮುಚ್ಚುವಿಕೆ, ರೈತರು ಕಾರ್ಮಿಕರ ದುಸ್ಥಿತಿ" ಎಂದು ತಿಳಿಸಿದೆ.
"ಪ್ರಧಾನಿ ನರೇಂದ್ರ ಮೋದಿ ಅವರು, ನೋಟು ರದ್ಧತಿ ಮೂಲಕ ಭಯೋತ್ಪಾದನೆ ನಿಯಂತ್ರಿಸುವುದಾಗಿ ಹೇಳಿದ್ದರು. ಹಾಗಿದ್ದರೂ, ಪುಲ್ವಾಮಾ, ಪಠಾಣ್ ಕೋಟ್, ಉರಿ, ಗಡ್ ಚಿರೋಲಿ ಸೇರಿದಂತೆ ಸಾವಿರಾರು ಭೀಕರ ಭಯೋತ್ಪಾದಕ ದಾಳಿಗಳು ನಡೆದಿವೆ. ಹಾಗಾದರೆ ನೋಟು ರದ್ದತಿಯ ನೈಜ ಉದ್ದೇಶ ಹೇಗೆ ಸಾಕಾರಗೊಂಡಿತು?" ಎಂದು ಕೇಳಿದೆ.