ಮುಂಬೈ, ನ.08 (DaijiworldNews/PY): "ಎಲ್ಲಾ ರೀತಿಯಾದ ಮುಂಜಾಗ್ರತಾ ಕ್ರಮ ಕೈಗೊಂಡು ದೀಪಾವಳಿಯ ಬಳಿಕ ಶಾಲೆಗಳನ್ನು ಮತ್ತೆ ತೆರೆಯಲು ನಾವು ಯೋಚಿಸಿದ್ದೇವೆ" ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಭಾನುವಾರ ವಿಡಿಯೋ ಸಂವಾದದಲ್ಲಿ ಮಾತನಾಡಿದ ಠಾಕ್ರೆ, "ಎಲ್ಲಾ ರೀತಿಯಾದ ಮುಂಜಾಗ್ರತಾ ಕ್ರಮ ಕೈಗೊಂಡು ದೀಪಾವಳಿಯ ಬಳಿಕ ಶಾಲೆಗಳನ್ನು ಮತ್ತೆ ತೆರೆಯಲು ನಾವು ಯೋಚಿಸಿದ್ದೇವೆ. ಅಲ್ಲದೇ, ಇದರೊಂದಿಗೆ ಧಾರ್ಮಿಕ ಸ್ಥಳಗಳನ್ನು ತೆರೆಯುವುದಕ್ಕೂ ಕೂಡಾ ಅವಕಾಶ ಕಲ್ಪಿಸಲಾಗುವುದು" ಎಂದಿದ್ದಾರೆ.
"ಕೊರೊನಾ ಸೋಂಕಿತರ ಮೇಲೆ ವಾಯುಮಾಲಿನ್ಯವು ಹೆಚ್ಚಿನ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು, ಪಟಾಕಿಗಳ ಬದಲು ಮಣ್ಣಿನ ಹಣತೆಗಳನ್ನು ಬೆಳಗಿಸಿ ದೀಪಾವಳಿ ಹಬ್ಬವನ್ನು ಆಚರಿಸಬೇಕು ಎಂದು ನಾನು ಜನತೆಯಲ್ಲಿ ಮನವಿ ಮಾಡುತ್ತೇನೆ" ಎಂದು ಹೇಳಿದ್ದಾರೆ.
"ದೀಪಾವಳಿ ಬಳಿಕದ 15 ದಿನಗಳು ನಿರ್ಣಾಯಕವಾಗಿವೆ. ಮತ್ತೊಮ್ಮೆ ಲಾಕ್ಡೌನ್ ಹೇರುವ ಪರಿಸ್ಥಿತಿ ಎದುರಾಗಬಾರದು. ನಾವು ಜಾಗರೂಕರಾಗಿರಬೇಕು" ಎಂದು ತಿಳಿಸಿದ್ದಾರೆ.