ತುಮಕೂರು, ನ.08 (DaijiworldNews/PY): "ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಕಾಂಗ್ರೆಸ್ನಲ್ಲಿ ಬೆಲೆ ಇಲ್ಲ. ಈ ಹಿನ್ನೆಲೆ ಅವರಿಗೆ ಮೂಲೆ ಗುಂಪಾಗುವ ಭೀತಿ ಉಂಟಾಗಿದೆ. ಈ ಕಾರಣದಿಂದಾಗಿ ಅವರು ಸಿಎಂ ಬಿಎಸ್ವೈ ಅವರ ಮೇಲೆ ಒಂದಲ್ಲಾ ಒಂದು ಆರೋಪ ಮಾಡುತ್ತಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆರ್.ಆರ್ ನಗರ ಹಾಗೂ ಶಿರಾ ಈ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಶಿರಾದಲ್ಲಿ 25 ಸಾವಿರ ಹಾಗೂ ಆರ್.ಆರ್.ನಗರದಲ್ಲಿ 40 ಸಾವಿರ ಅಂತರದಲ್ಲಿ ಬಿಜೆಪಿ ಜಯಶಾಲಿಯಾಗಲಿದೆ. ಈ ಬಾರಿ ನಮಗೆ ಗೆಲುವು ಖಚಿತ" ಎಂದಿದ್ದಾರೆ.
"ಸಿಎಂ ಬಿಎಸ್ವೈ ಅವರು ಈ ಭಾಗದಲ್ಲಿ ಪ್ರಚಾರ ನಡೆಸಿದ್ದರಿಂದ ಸಾಕಷ್ಟು ಪ್ರಭಾವ ಬೀರಿದೆ. ಕಾಂಗ್ರೆಸ್ನಲ್ಲಾಗುತ್ತಿರುವ ಒಳಜಗಳ ಬಿಜೆಪಿಯ ಗೆಲುವಿಗೆ ಕಾರಣ. ಕಾಂಗ್ರೆಸ್ ನಡುವಿನ ಒಳಜಗಳ ಈಗ ಆಂತರಿಕ ಜಗಳವಾಗಿದೆ. ಡಿ.ಕೆ.ಶಿವಕುಮಾರ್ ಅವರು ಆರ್.ಆರ್.ನಗರದ ಉಸ್ತವಾರಿ ವಹಿಸಿಕೊಂಡಿದ್ದರು. ಡಿಕೆಶಿ ಅವರು ಶಿರಾದಲ್ಲಿ ಕಾಂಗ್ರೆಸ್ ಸೋಲಿಸಲು ತಲೆಬಿಸಿ ಮಾಡಿಕೊಂಡಿದ್ದರು. ಇನ್ನು ಸಿದ್ದರಾಮಯ್ಯ ಅವರು ಆರ್.ಆರ್ ನಗರದಲ್ಲಿ ಕಾಂಗ್ರೆಸ್ ಸೋಲಿಸಲು ತಲೆಬಿಸಿ ಮಾಡಿಕೊಂಡಿದ್ದರು" ಎಂದು ಲೇವಡಿ ಮಾಡಿದ್ದಾರೆ.
"ಯಾವಾಗ ಕಾಂಗ್ರೆಸ್ಸಿಗರಿಗೆ ಸೋಲಾಗುತ್ತದೋ ಆ ವೇಳೆ ಅವರು ಇವಿಎಂನ ಮೇಲೆ ಅನುಮಾನಪಡುತ್ತಾರೆ. ಹಾಗಾದರೆ, ಗೆದ್ದರೆ ಇವಿಎಂ ಸರಿ ಇರುವುದಿಲ್ಲವೇ?. ಈ ಕಾರಣದಿಂದ ಕಾಂಗ್ರೆಸ್ಸಿಗರಿಗೆ ನಾವು ಸೋಲುತ್ತೇವೆ ಎಂದು ಅರ್ಥವಾಗಿದೆ. ಇವಿಎಂ ದೋಷವಿದ್ದಿದ್ದರೆ, ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನು ಗೆಲ್ಲಲು ನಾವು ಬಿಡುತ್ತಿದ್ದೆವಾ?" ಎಂದು ಪ್ರಶ್ನಿಸಿದ್ದಾರೆ.