ಭೋಪಾಲ್, ನ. 08 (DaijiworldNews/HR): ನಾಲ್ಕು ದಿನಗಳ ಹಿಂದೆ 200 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ನಿವಾರಿ ಜಿಲ್ಲೆಯಲ್ಲಿ ನಡೆದಿದ್ದು, 90 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ಬಳಿಕವೂ ಬಾಲಕನನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಹ್ಲಾದ್ ಎಂಬ ಬಾಲಕ ನಾಲ್ಕು ದಿನಗಳ ಹಿಂದೆ ಕೊಳವೆ ಬಾವಿಗೆ ಬಿದ್ದಿದ್ದು, ಭಾನುವಾರ ನಸುಕಿನ 3 ಗಂಟೆ ಸುಮಾರಿಗೆ ಬಾಲಕನನ್ನು ಕೊಳವೆ ಬಾವಿಯಿಂದ ಹೊರ ತೆಗೆಯಲಾಗಿದೆ. ತಕ್ಷಣವೇ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವ ಮೊದಲೇ ಬಾಲಕ ಮೃತಪಟ್ಟಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಬಾಲಕನ ಸಾವಿಗೆ ಬೇಸರ ವ್ಯಕ್ತಪಡಿಸಿದ್ದು, ಬಾಲಕನ ಕುಟುಂಬಕ್ಕೆ ₹5 ಲಕ್ಷ ಸಹಾಯಧನ ಘೋಷಿಸಿದ್ದಾರೆ.
ಬಾಲಕ 200 ಅಡಿ ಆಳದ ಕೊಳವೆ ಬಾವಿಯಲ್ಲಿ 60 ಅಡಿ ಅಂತರದಲ್ಲಿ ಸಿಲುಕಿದ್ದು, ಆತನನ್ನು ಹೊರತೆಗೆಯುವ ಪ್ರಯತ್ನವನ್ನು ಮಾಡಲಾಗುತ್ತಿತ್ತು. ಆದರೆ ಕಳೆದ ಮೂರು ದಿನಗಳಿಂದ ಬಾಲಕನ ಚಲನವಲನ ಕಾಣಿಸುತ್ತಿರಲಿಲ್ಲ ಎಂದು ಜಿಲ್ಲಾಧಿಕಾರಿ ಭಾರ್ಗವ್ ಹೇಳಿದ್ದಾರೆ.