ಅಹಮದಾಬಾದ್, ನ.08 (DaijiworldNews/PY): ಸೂರತ್ ಬಳಿಯ ಹಜೀರಾ ಹಾಗೂ ಭಾವನಗರ ಜಿಲ್ಲೆಯ ಘೋಘ ನಡುವೆ ಜಲಮಾರ್ಗ ಕಲ್ಪಿಸುವ ರೋ-ಪ್ಯಾಕ್ಸ್ ದೋಣಿ ಸೇವೆಯನ್ನು ಪ್ರಧಾನಿ ಮೋದಿ ಅವರು ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಅವರು, "ಈ ಸೇವೆಯು ಭಾವಾನಗರ ಹಾಗೂ ಸೂರತ್ ನಡುವಿನ 375 ಕಿ.ಮೀ ರಸ್ತೆ ಮಾರ್ಗವನ್ನು ಸಮುದ್ರ ಮಾರ್ಗದ ಮೂಲಕ 90 ಕಿ.ಮೀ ಗೆ ಕಡಿಮೆ ಮಾಡಲಿದೆ" ಎಂದು ತಿಳಿಸಿದ್ದಾರೆ.
"ರೋ-ಪ್ಯಾಕ್ಸ್ ದೋಣಿ ಸಮಯ ಹಾಗೂ ಇಂಧನವನ್ನು ಉಳಿಸುತ್ತದೆ. ಅಲ್ಲದೇ, ಇದು ರಾಜ್ಯದ ಪರಿಸರ ಹಾಗೂ ಪ್ರವಾಸೋದ್ಯಮವನ್ನು ಹೆಚ್ಚಿಸಲಿದೆ" ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.
"ದಕ್ಷಿಣ ಗುಜರಾತ್ನ ಸೂರತ್ ಜಿಲ್ಲೆಯ ಹಜೀರಾ ಹಾಗೂ ಭಾವನಗರದ ಘೋಘಾವನ್ನು ಸಂಪರ್ಕಿಸುವ ಈ ದೋಣಿಯು ಮೂರು ಅಂತಸ್ತನ್ನು ಹೊಂದಿದ್ದು, 30 ಟ್ರಕ್, 100 ಪ್ರಯಾಣಿಕ ಕಾರು ಹಾಗೂ 500 ಪ್ರಯಾಣಿಕರೊಂದಿಗೆ 34 ಸಿಬ್ಬಂದಿ ಹಾಗೂ ಆತಿಥ್ಯ ಸಿಬ್ಬಂದಿಗಳನ್ನು ಸಾಗಿಸುವಂತ ಸಾಮರ್ಥ್ಯವನ್ನು ಹೊಂದಿದೆ" ಎಂದು ತಿಳಿಸಿದೆ.