ಕೊಚ್ಚಿ, ನ.08 (DaijiworldNews/PY): "ಕೇರಳ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಅವರು ಚಿನ್ನ ಹಾಗೂ ಹಣ ಕಳ್ಳಸಾಗಣೆ ಮಾಡಲು ಧರ್ಮವನ್ನು ಸಾಧನವನ್ನಾಗಿ ಬಳಸಿಕೊಂಡಿದ್ದಾರೆ" ಎಂದು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಕೆ.ಎಸ್.ರಾಧಾಕೃಷ್ಣನ್ ಹೇಳಿದ್ದಾರೆ.
ರಾಜತಾಂತ್ರಿಕ ಮಾರ್ಗದ ಮೂಲಕ ಕಳುಹಿಸಿದ್ದ ಕುರಾನ್ ಗ್ರಂಥವನ್ನು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ವಿಭಾಗವು ಜಲೀಲ್ ಅವರಿಗೆ ನೋಟಿಸ್ ನೀಡಿದ್ದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಿಜೆಪಿ, "ಜಲೀಲ್ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಕೇರಳ ಸಿಎಂ ಅವರನ್ನು ಒತ್ತಾಯಿಸಿದ್ದಾರೆ.
"ಶಿಕ್ಷಣ ಸಚಿವರು ತಮ್ಮ ವೈಯುಕ್ತಿ ಕೆಲಸಕ್ಕಾಗಿ ಯುಎಇ ಕಾನ್ಸುಲೇಟ್ ಅನ್ನು ಬಳಸುತಿದ್ದಾರೆ. ಅಲ್ಲದೇ, ರಾಜ್ಯದ ನಿಯಮಗಳನ್ನು ಉಲ್ಲಂಘಿಸುವುದಕ್ಕೆ ಯಾವುದೇ ಹಿಂಜರಿಕೆ ಇಲ್ಲ" ಎಂದಿದ್ದಾರೆ.
ನ.9ರ ಸೋಮವಾರದಂದು ಜಲೀಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಕಸ್ಟಮ್ಸ್ ನೋಟಿಸ್ ನೀಡಿದೆ.