ಬೆಳಗಾವಿ, ನ. 08 (DaijiworldNews/HR): ಡಿಸಿಪಿ ಸೀಮಾ ಲಾಟ್ಕರ್ ಅವರಿಗೆ ನ್ಯಾಯಾಲಯದ ತಡೆಯಾಜ್ಞೆ ಆದೇಶ ಉಲ್ಲಂಘಿಸಿದ್ದ ಆರೋಪದಡಿ 10ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ.
ಮಲ್ಲಿಕ್ ಜಾನ್ ಪಠಾಣ್ ಹಾಗೂ ಸಂಬಂಧಿಕರಿಗೆ ಸೇರಿದ ಆಸ್ತಿ ವ್ಯಾಜ್ಯ ಸಂಬಂಧ ಸಿಆರ್ಪಿಸಿ ಕಲಂ 107ರಲ್ಲಿ ಲಾಟ್ಕರ್ ವಿಚಾರಣೆ ನಡೆಸಿದ್ದು, ಬಳಿಕ ಮಲ್ಲಿಕ್ ಜಾನ್ ಅವರಿಗೆ ಜೂನ್ 6ರಂದು ನೋಟಿಸ್ ಜಾರಿಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಮಲ್ಲಿಕ್ ನ್ಯಾಯಾಲಯದ ಮೊರೆ ಹೋಗಿದ್ದು, ಲಾಟ್ಕರ್ ನೀಡಿದ್ದ ನೋಟಿಸ್ಗೆ ನ್ಯಾಯಾಲಯ ಜೂನ್ 29ಕ್ಕೆ ತಡೆಯಾಜ್ಞೆನೀಡಿತ್ತು. ಆದೇಶ ಪ್ರತಿಯನ್ನು ಮಲ್ಲಿಕ್ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸಲ್ಲಿಸಿದ್ದರು ತಿಳಿದು ಬಂದಿದೆ.
ಇನ್ನು ಇದೇ ಪ್ರಕರಣದಡಿ ಅ.9ರಂದು ವಿಚಾರಣೆ ನಡೆಸಿದ್ದ ಸೀಮಾ ಮಲ್ಲಿಕ್ ಜಾನ್ಗೆ ಮತ್ತೆ ನೋಟಿಸ್ ನೀಡಿದ್ದರು. ತಡೆಯಾಜ್ಞೆ ಇದ್ದರೂ ಇನ್ನೊಂದು ನೋಟಿಸ್ ನೀಡಿದ್ದನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶ ಹೇಮಂತ್ ಅವರು ನ. 26ಕ್ಕೆ ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ ನೋಟಿಸ್ ಜಾರಿಗೊಳಿಸಿ ಆದೇಶಿಸಿದ್ದಾರೆ' ಎಂದು ತಿಳಿಸಿದರು.