ನವದೆಹಲಿ, ನ.08 (DaijiworldNews/PY): ಬಿಜೆಪಿ ಭೀಷ್ಮ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು 93ನೇ ವಸಂತಕ್ಕೆ ಕಾಲಿಟ್ಟಿದ್ದು, ಬಿಜೆಪಿ ಹಿರಿಯ ನಾಯಕನ ಹುಟ್ಟುಹಬ್ಬದಂದು ಪ್ರಧಾನಿ ಮೋದಿ, ಸಿಎಂ ಬಿಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ.
ಟ್ವೀಟ್ ಮೂಲಕ ಶುಭ ಕೋರಿದ ಪ್ರಧಾನಿ ಮೋದಿ ಅವರು, "ಎಲ್.ಕೆ.ಅಡ್ವಾಣಿ ಅವರು ಜನರನ್ನು ತಲುಪುವ ಮೂಲಕ ದೇಶದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ಹಾಗೂ ದೇಶದ ಜನತೆಗೆ ಅವರು ಸ್ಪೂರ್ತಿ. ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.
ಪಕ್ಷದ ಹಿರಿಯ ನೇತಾರ, ಮಾಜಿ ಉಪಪ್ರಧಾನಮಂತ್ರಿ, "ಪದ್ಮವಿಭೂಷಣ ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಜನ್ಮದಿನದ ಆದರಪೂರ್ವಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಸಿಎಂ ಬಿಎಸ್ವೈ ಅವರು ಹಾರೈಸಿದ್ದಾರೆ.
ಸಚಿವ ಶ್ರೀರಾಮಲು ಶುಭ ಕೋರಿದ್ದು, "ಮುತ್ಸದ್ಧಿ ರಾಜಕಾರಣಿ, ಭಾರತದ 7ನೇ ಉಪ ಪ್ರಧಾನಿ, ತತ್ವನಿಷ್ಠ ನಾಯಕ, ಭಾರತೀಯ ಜನತಾ ಪಕ್ಷದ ಅಗ್ರಗಣ್ಯ ನೇತಾರರಲ್ಲೊಬ್ಬರಾದ ಶ್ರೀ ಎಲ್ ಕೆ ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯಗಳು.ನಿಮ್ಮ ಅಗಾಧ ರಾಜಕೀಯ ಅನುಭವ ಹಾಗೂ ನಾಯಕತ್ವ ಗುಣಗಳು ಎಲ್ಲ ಪೀಳಿಗೆಗೆ ಯಾವತ್ತಿಗೂ ಮಾದರಿ" ಎಂದು ಹೇಳಿದ್ದಾರೆ.
ಗೃಹ ಸಚಿವ ಅಮಿತ್ ಶಾ ಕೂಡಾ ಶುಭ ಹಾರೈಸಿದ್ದು, "ಪಕ್ಷದ ಅಧ್ಯಕ್ಷರಾಗಿ ಹಾಗೂ ಕೇಂದ್ರದ ಗೃಹ ಸಚಿವರಾಗಿ ಎಲ್.ಕೆ ಅಡ್ವಾಣಿ ಅವರು ನೀಡಿದ ಕೊಡುಗೆ ಅಪಾರ. ನಾವು ಅವರು ತೋರಿದ ಹಾದಿಯಲ್ಲಿ ಸಾಗುತ್ತೇವೆ. ದೇವರು ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.