ಶಿವಮೊಗ್ಗ, ನ. 08 (DaijiworldNews/HR): ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ನಾನು ಹೇಳಿದ್ದೆ, ಇದೀಗ ಚುನಾವಣೋತ್ತರ ಸಮೀಕ್ಷೆ ಕೂಡ ಅದನ್ನೇ ಹೇಳಿದೆ. ಅಂತೆಯೇ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕೂಡ ನಿತೀಶ್ ಕುಮಾರ್ ಅವರು ಹೆಚ್ಚು ಸ್ಥಾನ ಗೆಲ್ಲಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಮ್ಮ ಬಗ್ಗೆ ವಿರೋಧ ಪಕ್ಷದವರು ಏನೇ ಟೀಕೆ-ಟಿಪ್ಪಣಿಗಳನ್ನು ಮಾಡಿದರೂ ಕೂಡ ಜನ ನಮ್ಮ ಪರ ಇದ್ದಾರೆ. ಇಲ್ಲಿವರೆಗೆ ಬಿಜೆಪಿಗೆ ಠೇವಣಿ ಸಿಗದ ಶಿರಾ ಕ್ಷೇತ್ರದಲ್ಲಿ 25 ಸಾವಿರ ಅಂತರದಲ್ಲಿ ಗೆಲುವು ಹಾಗೂ ರಾಜರಾಜೇಶ್ವರಿ ಕ್ಷೇತ್ರದಲ್ಲಿ 40 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ ಎಂದರು.
ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಸಂತ್ರಸ್ಥರ ಸಮಸ್ಯೆ ಹಲವು ವರ್ಷಗಳಿಂದಿದ್ದು, ಈ ಸಮಸ್ಯೆಗೆ ನ್ಯಾಯಯುತ ಪರಿಹಾರ ಕೊಡಲು ಸೂಚಿಸಿದ್ದು, ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಶಾಸಕರು, ಸಂಸದರು ಸಹ ಭಾಗಿಯಾಗಿದ್ದರು. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಇಂದು ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.