ನವದೆಹಲಿ, ನ.07 (DaijiworldNews/PY): ಪಿಎಸ್ಎಲ್ವಿ-ಸಿ 49 ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಹಿನ್ನೆಲೆ ಪ್ರಧಾನಿ ಮೋದಿ ಅವರು ಇಸ್ರೋ ಸೇರಿದಂತೆ ಯೋಜನೆಯಲ್ಲಿ ಪಾಲ್ಗೊಂಡ ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಅಮೇರಿಕಾ ಹಾಗೂ ಲುಕ್ಸಂಬರ್ಗ್ನ ತಲಾ ನಾಲ್ಕು ಹಾಗೂ ಲುಥುವೇನಿಯಾದ 1 ಸೇರಿದಂತೆ ಒಟ್ಟು ಒಂಭತ್ತು ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
"ಪಿಎಸ್ಎಲ್ವಿಸಿ49/ಇಒಎಸ್–01 ಮಿಶನ್ ಅನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಇಸ್ರೋ ಹಾಗೂ ಭಾರತೀಯ ಬಾಹ್ಯಾಕಾಶ ವಲಯವನ್ನು ನಾನು ಅಭಿನಂದಿಸುತ್ತೇನೆ. ಕೊರೊನಾದ ಈ ಸಮಯದಲ್ಲಿ ನಮ್ಮ ವಿಜ್ಞಾನಿಗಳು ಗಡುವನ್ನು ಪೂರೈಸಲು ಅನೇಕ ಅಡೆತಡೆಗಳನ್ನು ದಾಟಿ ಇದರಲ್ಲಿ ಗೆಲುವು ಸಾಧಿಸಿದ್ದಾರೆ" ಎಂದಿದ್ದಾರೆ.
ಭಾರತದ ಭೂ ವೀಕ್ಷಣಾ ಉಪಗ್ರಹ ಇಒಎಸ್-01 ಹಾಗೂ ವಿದೇಶದ 9 ಉಪಗ್ರಹಗಳನ್ನು ಒಳಗೊಂಡ ಪಿಎಸ್ಎಲ್ವಿ-ಸಿ 49 ರಾಕೆಟ್ ಶನಿವಾರ ಯಶಸ್ವಿಯಾಗಿ ಉಡಾವಣೆಯಾಗಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ವಿ-ಸಿ ಉಡಾವಣಾ ವಾಹನದಲ್ಲಿ ಇಒಎಸ್-01 ಹಾಗೂ ವಿದೇಶದ 9 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.