ಪುಣೆ, ನ.07 (DaijiworldNews/PY): "ಪ್ರಸಕ್ತ ಯುದ್ದವು ಅನಿರೀಕ್ಷಿತ ಭದ್ರತಾ ಸನ್ನಿವೇಶಗಳೊಂದಿಗೆ ಹೆಚ್ಚು ಸಂಕೀರ್ಣ ಹಾಗೂ ಬಹು ಆಯಾಮದಿಂದ ಕೂಡಿದೆ" ಎಂದು ಶನಿವಾರ ವಾಯುಸೇನೆ ಮುಖ್ಯಸ್ಥ ಆರ್.ಕೆ.ಎಸ್.ಭದೌರಿಯಾ ಹೇಳಿದ್ದಾರೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ (ಎನ್ಡಿಎ) 139ನೇ ಕೋರ್ಸ್ನ ವಿದ್ಯಾರ್ಥಿಗಳ ನಿರ್ಗಮನದ ಸಮಾರಂಭದಲ್ಲಿ ಮಾತನಾಡಿದ ಅವರು, "ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಹುದ್ದೆ ಹಾಗೂ ಮಿಲಿಟರಿ ವ್ಯವಹಾರಗಳ ಇಲಾಖೆಯನ್ನು ದೇಶದ ಉನ್ನಯ ರಕ್ಷಣಾ ಸುಧಾರಣೆಗಳ ಅತ್ಯಂತ ಐಸಿಹಾಸಿಕ ಹಂತದ ಆರಂಭವನ್ನು ಸೂಚಿಸುತ್ತದೆ" ಎಂದು ಶ್ಲಾಘಿಸಿದ್ದಾರೆ.
"ಎನ್ಡಿಎ ಕೇವಲ ನಾಯಕತ್ವದ ತೊಟ್ಟಿಲು ಅಲ್ಲ. ಅದು ಜಂಟಿ ನಿರ್ವಹಣೆಯ ತೊಟ್ಟಿಲು. ಎನ್ಡಿಎಯಲ್ಲಿ ಜಂಟಿ ತರಬೇತಿಯ ಅಪಾರ ಅನುಭವವನ್ನು ಆಯಾ ಆಕಾಡೆಮಿಗಳಿಗೆ ಕೊಂಡೊಯ್ಯಬೇಕಾಗಿದೆ" ಎಂದಿದ್ದಾರೆ.
"ನಮ್ಮ ಸಶಸ್ತ್ರ ಪಡೆಗಳು ಉಗ್ರರ ದಾಳಿಗಳನ್ನು ಎದುರಿಸಲು ಸಿದ್ದರಾಗಿರಬೇಕು. ಇದು ಎಲ್ಲಾ ಸಮಯದಲ್ಲೂ ಉನ್ನತ ಮಟ್ಟದ ಜ್ಞಾನ, ಸಮರ್ಪಣೆ, ಬದ್ಧತೆ, ತ್ಯಾಗ ಮತ್ತು ನಾಯಕತ್ವವನ್ನು ಕಡ್ಡಾಯಗೊಳಿಸುತ್ತದೆ. ಪ್ರತಿ ಸೇವೆ ಮತ್ತು ರಾಷ್ಟ್ರವು ನಿಮ್ಮಿಂದ ನಿರೀಕ್ಷಿಸುವುದು ಇದನ್ನೇ" ಎಂದು ತಿಳಿಸಿದ್ದಾರೆ.