ಮುಝಾಫರ್ಪುರ್, ನ. 07 (DaijiworldNews/MB) : ಮತದಾನದ ಮಾಡಲು ತೆರಳಲೆಂದೇ ಚುನಾವಣಾ ದಿನದ ಮುಂಚಿನ ದಿನ ತಾತ್ಕಾಲಿಕ ಸೇತುವೆ ನಿರ್ಮಾಣ ಪೂರ್ಣಗೊಳಿಸಿದ ಘಟನೆ ಮುಝಾಫರ್ಪುರದ ಸಿರ್ನಿಯಾ ಗ್ರಾಮದಲ್ಲಿ ನಡೆದಿದೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿರುವ ಸ್ಥಳೀಯರಾದ ಪರ್ವೀಝ್ ಆಲಾಮ್, ''ಈ ಸೇತುವೆಯು ಎರಡು ಕಡೆಯ ಜನರನ್ನು ಸಂಪರ್ಕಿಸುತ್ತದೆ. ಜನರಿಗೆ ಸಂಚಾರಕ್ಕೆ ಸಹಾಯಕವಾಗಿದೆ. ಈ ಪ್ರದೇಶದಲ್ಲಿ ಹೊಳೆ ದಾಟಿ ಬರಲು ಯಾವುದೇ ಸೇತುವೆಯಿಲ್ಲ. ಈ ಕಾರಣದಿಂದಾಗಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ'' ಎಂದು ತಿಳಿಸಿದ್ದಾರೆ.
''ಈ ಚುನಾವಣೆಯಲ್ಲಿ ಹೆಚ್ಚಿನ ಜನರು ಮತದಾನ ಮಾಡಬೇಕು ಎಂಬ ಉದ್ದೇಶದಿಂದಾಗಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಸೇತುವೆಯ ನಿರ್ಮಾಣ ಕಾರ್ಯವು ಅಕ್ಟೋಬರ್ 27 ರಂದು ಪ್ರಾರಂಭವಾಗಿದ್ದು ನವೆಂಬರ್ 6 ರಂದು ಅಂತ್ಯವಾಗಿದೆ. ನವೆಂಬರ್ 7 ರಂದು ಜನರು ಮತದಾನ ಮಾಡಲು ಈ ಸೇತುವೆ ಮೂಲಕ ತೆರಳಿದ್ದಾರೆ'' ಎಂದು ಹೇಳಿದ್ದಾರೆ.
''ಮತಗಟ್ಟೆ ಹಾಗೂ ಅಂಗಡಿಗಳು ಈ ಹೊಳೆಯ ಇನ್ನೊಂದು ಬದಿಯಲ್ಲಿದೆ. ಈ ಹಿಂದೆ ಜನರು ಬೋಟ್ನ ಮೂಲಕ ಈ ಹೊಳೆಯನ್ನು ದಾಟಿ ಆ ಬದಿಗೆ ತೆರಳುತ್ತಿದ್ದರು'' ಎಂದು ಕೂಡಾ ತಿಳಿಸಿದ್ದಾರೆ.
ಬಿಹಾರದಲ್ಲಿಂದು 78 ಕ್ಷೇತ್ರಗಳಿಗೆ ಬಿಹಾರ ವಿಧಾನಸಭೆಯ ಮೂರನೇ ಮತ್ತು ಅಂತಿಮ ಹಂತದ ಮತದಾನ ನಡೆಯುತ್ತಿದೆ. ನವೆಂಬರ್ 10 ರಂದು ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ.