ತಿರುವನಂತಪುರ, ನ. 07 (DaijiworldNews/HR): ಕೇರಳ ಸರ್ಕಾರವು ಜೈಲಿನಲ್ಲಿರುವ ಕೈದಿಗಳ ಮಕ್ಕಳ ಶಿಕ್ಷಣಕ್ಕಾಗಿ 20 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಅದರಲ್ಲಿ 15 ಲಕ್ಷವನ್ನು ಮೂಲಭೂತ ಶಿಕ್ಷಣಕ್ಕಾಗಿ ಹಾಗೂ 5 ಲಕ್ಷವನ್ನು ವೃತ್ತಿಪರ ಶಿಕ್ಷಣಕ್ಕಾಗಿ ಮಂಜೂರು ಮಾಡಲಾಗಿದೆ ಎಂದು ರಾಜ್ಯ ಸಾಮಾಜಿಕ ನ್ಯಾಯ ಸಚಿವರಾದ ಕೆ.ಕೆ.ಶೈಲಜಾ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವೆ ಶೈಲಜಾ, ಜೈಲಿನಲ್ಲಿರುವ ಕೈದಿಗಳ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸಬೇಕು ಎಂಬ ಉದ್ದೇಶದಿಂದ ಸಾಮಾಜಿಕ ನ್ಯಾಯ ಇಲಾಖೆಯು ಈ ಶೈಕ್ಷಣಿಕ ನೆರವನ್ನು ಜಾರಿಗೊಳಿಸಿದ್ದು, ಕುಟುಂಬದಲ್ಲಿ ದುಡಿಯುವ ವ್ಯಕ್ತಿಗಳು ಜೈಲು ಸೇರಿದಾಗ ಮಕ್ಕಳ ಶಿಕ್ಷಣಕ್ಕೂತೊಂದರೆ ಆಗಬಾರದು ಎಂಬ ಉದ್ದೇಶದಿಂದ ಯೋಜನೆ ಜಾರಿ ಮಾಡಿದೆ ಎಂದು ಹೇಳಿದ್ದಾರೆ.
ಇನ್ನು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ 1ರಿಂದ 5ನೇ ತರಗತಿ ಮಕ್ಕಳಿಗೆ ಪ್ರತಿ ತಿಂಗಳು 300, 6ರಿಂದ 10ನೇ ತರಗತಿ ಮಕ್ಕಳಿಗೆ 500, ಹಾಗೂ ಪದವಿ ಪೂರ್ವ ಓದುತ್ತಿರುವವರಿಗೆ 750, ಪದವಿ ಮತ್ತು ವೃತ್ತಿಪರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ 1,000 ಮತ್ತು ಜೀವಾವಧಿ ಅಥವಾ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕೈದಿಗಳ ಮಕ್ಕಳ ಶಿಕ್ಷಣಕ್ಕೂ ವೃತ್ತಿಪರ ಶಿಕ್ಷಣಕ್ಕಾಗಿ ಯೋಜನೆಯಡಿ ನೆರವು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.