ಬೆಂಗಳೂರು, ನ.07 (DaijiworldNews/PY): "ರಾಜ್ಯ ಸರ್ಕಾರ ಪ್ರಕಟಿಸಿರುವ ಕರ್ನಾಟಕ ಸೇವಾ ನಾಗರಿಕ (ನಡತೆ) ನಿಯಮ 2020 ಕರಡು ನಿಯಮಗಳು ವಿರೋಧಾಭಾಸ ಮತ್ತು ಗೊಂದಲದಿಂದ ಕೂಡಿದೆ. ಈ ಬಗ್ಗೆ ತಜ್ಞರಿಂದ ಅಧ್ಯಯನ ನಡೆಸಿ ವರದಿ ತರಿಸಿಕೊಂಡು ವಿಧಾನಮಂಡಲದಲ್ಲಿ ಚರ್ಚೆಗೊಳಪಡಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು" ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರಾಜ್ಯ ಸರ್ಕಾರ ಪ್ರಕಟಿಸಿರುವ ಕರ್ನಾಟಕ ಸೇವಾ ನಾಗರಿಕ (ನಡತೆ) ನಿಯಮ 2020 ಕರಡು ನಿಯಮಗಳು ವಿರೋಧಾಭಾಸ ಮತ್ತು ಗೊಂದಲದಿಂದ ಕೂಡಿದೆ. ಈ ಬಗ್ಗೆ ತಜ್ಞರಿಂದ ಅಧ್ಯಯನ ನಡೆಸಿ ವರದಿ ತರಿಸಿಕೊಂಡು ವಿಧಾನಮಂಡಲದಲ್ಲಿ ಚರ್ಚೆಗೊಳಪಡಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಅವಸರದ ನಿರ್ಧಾರ ಬೇಡ" ಎಂದಿದ್ದಾರೆ.
"ಕರ್ನಾಟಕ ಸೇವಾ ನಾಗರಿಕ (ನಡತೆ)ನಿಯಮದ ಕರಡನ್ನು ಓದಿದರೆ ಇದು ಸರ್ಕಾರಿ ನೌಕರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಗುಪ್ತ ಕಾರ್ಯಸೂಚಿಯನ್ನು ಹೊಂದಿದೆ ಎಂಬ ಅನುಮಾನ ಮೂಡಿಸುತ್ತದೆ. ನೀತಿ ಸಂಹಿತೆಗಳು ಸ್ವಯಂಸ್ಪೂರ್ತಿಯಿಂದ ಪಾಲಿಸುವಂತಾಗಬೇಕೇ ಹೊರತು ಬಲವಂತದ ಹೇರಿಕೆಯಿಂದ ಅಲ್ಲ" ಎಂದು ತಿಳಿಸಿದ್ದಾರೆ.
"ನಾಗರಿಕ (ನಡತೆ) ನಿಯಮದ ಕರಡಿನಲ್ಲಿ ಸರ್ಕಾರಿ ನೌಕರರ ಕುಟುಂಬದ ಸದಸ್ಯರನ್ನೂ ನಿಯಂತ್ರಿಸಲು ಹೊರಟಿರುವುದು ಅವರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ. ಇದನ್ನು ಖಂಡಿತ ಒಪ್ಪಲು ಸಾಧ್ಯ ಇಲ್ಲ. ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಕರಡಿಗೆ ಅಂತಿಮ ರೂಪ ಕೊಡಲು ಹೊರಟರೆ ಸೂಕ್ತ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ" ಎಂದಿದ್ದಾರೆ.