ನವದೆಹಲಿ, ನ.07 (DaijiworldNews/PY): ಕೇಂದ್ರ ಮಾಹಿತಿ ಆಯೋಗದ ಮುಖ್ಯಸ್ಥರಾಗಿ ಯಶವರ್ಧನ್ ಕುಮಾರ್ ಸಿನ್ಹಾ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಶನಿವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಿನ್ಹಾ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಆಗಸ್ಟ್ 26 ರಂದು ಬಿಮಲ್ ಜುಲ್ಕಾ ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರ ಎರಡು ತಿಂಗಳಿನಿಂದ ಈ ಹುದ್ದೆ ಖಾಲಿ ಇತ್ತು.
62 ವರ್ಷದ ಯಶವರ್ಧನ್ ಕುಮಾರ್ ಸಿನ್ಹಾ ಅವರು ಮಾಜಿ ರಾಯಭಾರಿಯಾಗಿದ್ದು, ಜನವರಿ 1ರಂದು ಕೇಂದ್ರ ಮಾಹಿತಿ ಆಯೋಗಕ್ಕೆ ಸೇರ್ಪಡೆಯಾಗಿದ್ದರು. ಅಲ್ಲದೇ, ಇಂಗ್ಲೆಂಡ್ ಹಾಗೂ ಶ್ರೀಲಂಕಾಗಳಿಗೆ ಭಾರತದ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಸಿನ್ಹಾ ಅವರು ಕೇಂದ್ರ ಮಾಹಿತಿ ಆಯೋಗದ ಮುಖ್ಯಸ್ಥರಾಗಿ ಮೂರು ವರ್ಷಗಳ ಕಾಲ ಅಧಿಕಾರದಲ್ಲಿರಲಿದ್ದಾರೆ. ಕೇಂದ್ರ ಮಾಹಿತಿ ಆಯೋಗದ ಆಯುಕ್ತರಾಗಿ ನೇಮಕಗೊಳ್ಳುವವರು ಐದು ವರ್ಷ ಅಥವಾ 65 ವರ್ಷ ಹೊಂದುವವರೆಗೆ ಅಧಿಕಾರದಲ್ಲಿರುತ್ತಾರೆ.
ಪ್ರಧಾನಿ ಮೋದಿ ನೇತೃತ್ವದ ಮೂವರು ಸದಸ್ಯರ ಸಮಿತಿಯು ಸಿನ್ಹಾ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಿತ್ತು. ಪ್ರಧಾನಿ ಮೋದಿ ಸೇರಿದಂತೆ ಲೋಕಸಭೆಯ ಕಾಂಗ್ರೆಸ್ ಮುಖಂದ ಅಧೀರ್ ರಂಜನ್ ಚೌಧರಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಮಾಹಿತಿ ಆಯೋಗದ ಸದಸ್ಯರಾಗಿದ್ದಾರೆ.