ಬೆಂಗಳೂರು, ನ. 07 (DaijiworldNews/MB) : ಕನ್ನಡ ರಾಜ್ಯ, ಭಾಷೆ, ಸಂಸ್ಕೃತಿಗೆ ತಮ್ಮ ಅನನ್ಯ ಕೊಡುಗೆ ನೀಡಿದವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು.
ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ''ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲಾಗಿದೆ. ಈ ನಾಡು ನುಡಿಗಾಗಿ ಇವರು ಇನ್ನಷ್ಟು ಸೇವೆ ಮಾಡಲಿ ಎಂದು ನಾನು ಆಶಿಸುತ್ತೇನೆ. ನಾವು ಕನ್ನಡ ಭಾಷೆ ಬಳಸಿದಷ್ಟು ಬೆಳೆಯುತ್ತದೆ. ಈ ನಿಟ್ಟಿನಲ್ಲಿ ನಾವು ಕನ್ನಡ ಭಾಷೆಗೆ ಪ್ರಾತಿನಿಧ್ಯತೆ ನೀಡಿ ಕನ್ನಡ ಬೆಳೆಸಿ ಉಳಿಸೋಣ'' ಎಂದು ಹೇಳಿದರು.
ಹಾಗೆಯೇ ಈ ವೇಳೆ ಮಾತನಾಡಿದ ಸಚಿವ ಸಿ.ಟಿ. ರವಿಯವರು, ''ಕನ್ನಡ ಭಾಷೆಗೆ ಭವ್ಯವಾದ ಇತಿಹಾಸವಿದೆ. ಈ ಭೂಮಿಗೂ ಒಂದು ಮಹತ್ವದ ಭೌಗೋಳಿಕ ಹಿನ್ನೆಲೆಯಿದೆ. ಭಾಷೆ ನಾಶವಾದರೆ ನಮ್ಮ ನಾಡಿನ ಸಂಸ್ಕೃತಿಯೂ ನಾಶವಾಗುತ್ತದೆ. ಆದ್ದರಿಂದ ನಾವು ನಾಡು ನುಡಿಗಾಗಿ ನಮ್ಮ ಸೇವೆ ಸಲ್ಲಿಸಬೇಕು'' ಎಂದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದ ತೇಜಸ್ವಿ ಸೂರ್ಯ ಶಾಸಕ ಉದಯ ಗರುಡಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.