ನವದೆಹಲಿ, ನ.07 (DaijiworldNews/PY): "ಇಂದು ಭಾರತ ದೇಶದಲ್ಲಿ ಯುವಕರಿಗೆ ಸುಲಭವಾಗಿ ಉದ್ಯಮ ನಡೆಸುವ ಸಲುವಾಗಿ ಪೂರಕವಾದಂತ ವಾತಾವರಣವನ್ನು ಕಲ್ಪಿಸಿಕೊಡಬೇಕಾಗಿದೆ. ಇದರ ಮೂಲಕ ತಮ್ಮ ಸಂಶೋಧನೆಗಳ ಮುಖೇನ ಕೋಟ್ಯಾಂತರ ಭಾರತೀಯರ ಜೀವನದಲ್ಲಿ ಬದಲಾವಣೆಗಳನ್ನು ತರಬಹುದಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ತಂತ್ರಜ್ಞಾನ ಸಂಸ್ಥೆಯ 51ನೇ ವಾರ್ಷಿಕ ಸಮ್ಮೇಳನದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, "ಕೊರೊನಾ ಬಳಿಕ ಪ್ರಪಂಚದ ಚಿತ್ರಣವೇ ಬದಲಾಗಿದೆ. ಅಲ್ಲದೇ, ಇದರೊಂದಿಗೆ ತಂತ್ರಜ್ಞಾನವು ಕೂಡ ಪ್ರಮುಖ ಪಾತ್ರ ವಹಿಸಲಿದೆ. ಜಾಗತೀಕರಣ ಮುಖ್ಯ. ಆದರೆ, ಅದರೊಂದಿಗೆ ಸ್ವಾವಲಂಬನೆ ಕೂಡಾ ಅಷ್ಟೇ ಮುಖ್ಯವಾಗಿದೆ" ಎಂದರು.
"ಭಾರತವು ಯುವಕರಿಗೆ ಉದ್ಯಮವನ್ನು ಸುಲಭಗೊಳಿಸಲು ಸಂಪೂರ್ಣ ಬದ್ದವಾಗಿದೆ. ಇದರಿಂದಾಗಿ ಯುವಕರು ತಮ್ಮ ನಾವೀನ್ಯತೆಯ ಮೂಲಕ ದೇಶದ ಕೋಟ್ಯಾಂತರ ಜನರ ಜೀವನದಲ್ಲಿ ಬದಲಾವಣೆಯನ್ನು ತರಬಹುದು" ಎಂದು ತಿಳಿಸಿದರು.
"ವಿದ್ಯಾರ್ಥಿಗಳು ಗುಣಮಟ್ಟದತ್ತ ಗಮನಹರಿಸಬೇಕು. ಈ ವಿಚಾರವಾಗಿ ಎಂದಿಗೂ ರಾಜಿ ಮಾಡಿಕೊಳ್ಳಬಾರದು. ಬೃಹತ್ ಪ್ರಮಾಣದಲ್ಲಿ ನಿಮ್ಮ ಕಾರ್ಯಗಳನ್ನು ಮಾಡಿ. ಇಂದಿನ ಯುವಜನತೆಗೆ ಕೇಂದ್ರ ಸಕಾರದ ಆತ್ಮನಿರ್ಭರ ಅಭಿಯಾನ ನೂತನ ಅವಕಾಶಗಳನ್ನು ತೆರೆದಿಡುತ್ತಿದೆ. ಇದರ ಮೂಲಕ ತಮ್ಮ ಸೃಜನಶೀಲತೆಯನ್ನು ಮುಕ್ತವಾಗಿ ಅನಾವರಣ ಮಾಡಬಹುದು" ಎಂದು ಹೇಳಿದರು.
"ನೀವೆಲ್ಲರೂ ಕೂಡಾ ವಿಶೇಷ ಸಾಮರ್ಥ್ಯವನ್ನು ಹೊಂದಿರುವ ವಿದ್ಯಾರ್ಥಿಗಳು. ನಿಮಗೆ ನೀವು ಮಾಡಿದ ಸಾಧನೆಯ ಬಗ್ಗೆ ಹೆಮ್ಮೆಯಿರಬೇಕು. ನೀವೆಲ್ಲರೂ ಕಠಿಣವಾದ ಜೆಇಇ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಐಐಟಿ ಪ್ರವೇಶ ಮಾಡಿದ್ದೀರಿ. ನಿಮ್ಮಲ್ಲಿ ಯಶಸ್ಸು, ವಿನಮ್ರತೆ, ವಿನಯತೆ ಸದಾ ಇರಬೇಕು" ಎಂದು ತಿಳಿಸಿದರು.
"ಇಂದು ವಿಜ್ಞಾನಿ ಸರ್.ಸಿ.ವಿ.ರಾಮನ್ ಅವರ ಜನ್ಮದಿನ. ಸಿ.ವಿ.ರಾಮನ್ ಅವರು ಮಾಡಿಹೋದ ಕಾರ್ಯಗಳು ನಮ್ಮನ್ನು ಎಂದಿಗೂ ಕೂಡಾ ಉತ್ಸಾಹದಿಂದಿರುವಂತೆ ಮಾಡುತ್ತದೆ. ಅವರು ಯುವ ವಿಜ್ಞಾನಿಗಳಿಗೆ ಆದರ್ಶವಾಗಿದ್ದಾರೆ" ಎಂದರು.