ಭುವನೇಶ್ವರ್, ನ.07 (DaijiworldNews/PY): ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಡಿ.31ರವರೆಗೆ ಶಾಲಾಗಳನ್ನು ಮುಚ್ಚಲಾಗುವುದು ಎಂದು ಒಡಿಶಾ ಸರ್ಕಾರ ಶನಿವಾರ ಘೋಷಿಸಿದೆ.
ಸಾಂದರ್ಭಿಕ ಚಿತ್ರ
ಡಿ.31ರವರೆಗೆ ಶಾಲಾರಂಭವನ್ನು ಮುಂದೂಡಿದ್ದರೂ ಕೂಡಾ ಎಂದಿನಂತೆ ಆನ್ಲೈನ್ ತರಗತಿಗಳು ಮುಂದುವರೆಯಲಿವೆ ಎಂದು ಸರ್ಕಾರ ತಿಳಿಸಿದೆ.
ಒಡಿಶಾ ಸರ್ಕಾರ ಬಿಡುಗಡೆ ಮಾಡಿರುವ ಆದೇಶದಲ್ಲಿ, ರಾಜ್ಯದಲ್ಲಿ ಪರೀಕ್ಷೆ ಸೇರಿದಂತೆ ಮೌಲ್ಯಮಾಪನ ಹಾಗೂ ಆಡಳಿತಾತ್ಮಕ ಚಟುವಟಿಕೆ ನಡೆಸಲು ಅನುಮತಿ ಇದೆ. ಸೋಂಕು ಪೀಡಿತ ವಲಯದಲ್ಲಿನ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳನ್ನು ಹೊರತುಪಡಿಸಿ, ಉಳಿದ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಕಾರ್ಯನಿರ್ವಹಿಸಲು ಸೂಚಿಸಲಾಗುವುದು ಎಂದು ಹೇಳಿದೆ
ಈ ಬಗ್ಗೆ ತಿಳಿಸಿರುವ ಒಡಿಶಾ ಶಿಕ್ಷಣ ಸಚಿವ ಸಮೀರ್ ರಂಜನ್ ದಾಸ್ ಅವರು, "ಕೊರೊನಾದ ಎರಡನೇ ಹಂತದ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಹಾಗೂ ಮುಂಜಾಗ್ರತಾ ಕ್ರಮವಾಗಿ ಡಿ.31ರವರೆಗೆ ಶಾಲೆಗಳನ್ನು ಮುಚ್ಚಲು ತೀರ್ಮಾನ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
"ನವೆಂಬರ್ ತಿಂಗಳಿನಲ್ಲಿ 9ರಿಂದ 12ನೇ ತರಗತಿವರೆಗೆ ಪ್ರಾರಂಭ ಮಾಡಲು ತೀರ್ಮಾನ ಕೈಗೊಳ್ಳಲಾಗಿದ್ದು, ಆದರೆ, ಈಗ ಕೊರೊನಾ ಸೋಂಕಿನ ಹಿನ್ನೆಲೆ ಡಿ.31ರವರೆಗೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲು ತೀರ್ಮಾನ ಮಾಡಲಾಗಿದೆ" ಎಂದಿದ್ದಾರೆ.