ಜಮ್ಮು, ನ. 07 (DaijiworldNews/MB) : ಮತ್ತೆ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಸೇನಾಪಡೆ ಜಮ್ಮು ಮತ್ತು ಕಾಶ್ಮೀರದ ಪೂಂಚ್, ಕಥುವಾ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆ ಹಾಗೂ ಅಂತರರಾಷ್ಟ್ರೀಯ ಗಡಿ ಸಮೀಪದ ಗ್ರಾಮಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ''ಪಾಕಿಸ್ತಾನ ಪಡೆಯು ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮವನ್ನು ಉಲ್ಲಂಘನೆ ಮಾಡಿದೆ. ಮಧ್ಯರಾತ್ರಿ 2.30ರಿಂದ ಪೂಂಚ್ನ ಗಡಿ ನಿಯಂತ್ರಣ ರೇಖೆಯ ಮನಕೋಟ್ ಸೆಕ್ಟರ್ನಲ್ಲಿ ಶೆಲ್ ದಾಳಿ ಪ್ರಾರಂಭಿಸಿದೆ'' ಎಂದು ತಿಳಿಸಿದ್ದಾರೆ.
ಹಾಗೆಯೇ ''ಅಂತರರಾಷ್ಟ್ರೀಯ ಗಡಿ ರೇಖೆಯ ಹಿರಾನಗರ್ ಸೆಕ್ಟರ್ನಲ್ಲೂ ರಾತ್ರಿ ಪೂರ್ತಿ ಭಾರತೀಯ ಸೇನೆ ಹಾಗೂ ಪಾಕಿಸ್ತಾನ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಆದರೆ ಈವರೆಗೆ ಭಾರತೀಯ ಯೋಧರಿಗೆ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ'' ಎಂದು ಹೇಳಿದ್ದಾರೆ.