ಮುಂಬೈ, ನ. 07 (DaijiworldNews/MB) : ''ಜಮ್ಮು-ಕಾಶ್ಮೀರದ ಜನರ ಸಾಂವಿಧಾನಿಕ ಹಕ್ಕುಗಳನ್ನು ಮರಳಿ ಪಡೆಯುವವರೆಗೂ ನಾನು ಸಾಯುವುದಿಲ್ಲ'' ಎಂದು ಹೇಳಿಕೆ ನೀಡಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಅವರಿಗೆ ತಿರುಗೇಟು ನೀಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ''ಫಾರೂಕ್ ಅಬ್ದುಲ್ಲಾ ಬೇಕಾದರೆ ಪಾಕಿಸ್ತಾನಕ್ಕೆ ಹೋಗಬಹುದು'' ಎಂದು ಹೇಳಿದ್ದಾರೆ.
ಫಾರೂಖ್ ಅಬ್ದುಲ್ಲಾ ಹೇಳಿಕೆಯ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವತ್ ಅವರು, ''ಫಾರೂಕ್ ಅಬ್ದುಲ್ಲಾರವರು ಬಯಸಿದರೆ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ 370 ನೇ ವಿಧಿಯನ್ನು ಜಾರಿಗೆ ತರಬಹುದು. ಭಾರತದಲ್ಲಿ ಈ ಆರ್ಟಿಕಲ್ 370 ಮತ್ತು 35 ಎ ಗೆ ಯಾವುದೇ ಸ್ಥಾನವಿಲ್ಲ'' ಎಂದು ಹೇಳಿದ್ದಾರೆ.
ಶುಕ್ರವಾರ ಜಮ್ಮುವಿನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಫಾರೂಕ್ ಅಬ್ದುಲ್ಲಾ ಅವರು, ''ನಮ್ಮ ರಾಜ್ಯದ ಜನರಿಗೆ ಬೇಕಾದ ಸಾಂವಿಧಾನಿಕ ಹಕ್ಕುಗಳನ್ನು ಮರಳಿ ಪಡೆಯುವವರೆಗೂ ನಾನು ಸಾಯುವುದಿಲ್ಲ. ಜನರಿಗೆ ಬೇಕಾಗಿ ನಾನು ಏನು ಮಾಡಲು ಸಿದ್ದ ಅದಕ್ಕಾಗಿ ಇನ್ನು ಬದುಕುಳಿದಿದ್ದೇನೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ಮತ್ತೆ ಜಾರಿ ಮಾಡುವವರೆಗೂ ನಾನು ಬದುಕಿರುತ್ತೇನೆ'' ಎಂದು ಹೇಳಿದ್ದರು.