ಮಡಿಕೇರಿ, ನ. 07 (DaijiworldNews/MB) : ''ಗೋಹತ್ಯೆ ಮತ್ತು ಅಕ್ರಮ ಜಾನುವಾರು ಸಾಗಣೆ ತಡೆಗೆ ಪ್ರತ್ಯೇಕವಾಗಿ ವಿಶೇಷ ಕಾರ್ಯಪಡೆ ರಚಿಸಲು ಯೋಜಿಸಲಾಗುತ್ತಿದೆ'' ಎಂದು ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನವೆಂಬರ್ 6 ಶುಕ್ರವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಗೋಹತ್ಯೆ ಮತ್ತು ಜಾನುವಾರು ಕಳ್ಳಸಾಗಣೆ ನಿಯಂತ್ರಿಸಲು ಈಗಾಗಲೇ ಎನ್ಜಿಒಗಳ ಸೇರ್ಪಡೆಯೊಂದಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ನಾವು ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದೇವೆ. ಜಾನುವಾರು ಕಳ್ಳಸಾಗಣೆದಾರರು ಮತ್ತು ಈ ಕಾರ್ಯಗಳಲ್ಲಿ ಸಹಾಯ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ. ಕಾರ್ಯಪಡೆ ರಚನೆಯ ಪ್ರಸ್ತಾಪವಿದೆ" ಎಂದು ತಿಳಿಸಿದ್ದಾರೆ.
"ಕೊರೊನಾ ಸೋಂಕು ಸಮಯದಲ್ಲಿ ಅಪರಾಧದ ಪ್ರಕರಣಗಳು ಕ್ಷೀಣಿಸಿವೆ. ಆದರೆ ಈಗ ಅಧಿಕವಾಗುತ್ತಿದೆ. ಈ ಹಿನ್ನೆಲೆ ಪೊಲೀಸರಿಗೆ ಅತ್ಯಂತ ಜಾಗರೂಕರಾಗಿದ್ದು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ. ವಿಶೇಷವಾಗಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಬಗ್ಗೆ ಗಮನಹರಿಸಲು ಪೊಲೀಸರಿಗೆ ಸೂಚಿಸಲಾಗಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.