ಬೆಂಗಳೂರು, ನ. 07 (DaijiworldNews/HR): ಕರ್ನಾಟಕ ಬಿಜೆಪಿಯವರಿಗೆ ಗೂಂಡಾ ರಾಜ್ಯ ಎನ್ನುವ ಹಣೆಪಟ್ಟಿ ಹೊತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರೇರಣೆಯಾಗಿರುವುದು ದುರದೃಷ್ಟಕರ ಸಂಗತಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕರ್ನಾಟಕದ ಕೆಲವು ಸಚಿವರು ಉತ್ತರಪ್ರದೇಶದ ಮುಖ್ಯಮಂತ್ರಿಯವರಿಂದ ಪ್ರೇರಿತರಾಗಿರುವುದು ದುರದೃಷ್ಟಕರ ಸಂಗತಿ. ಪ್ರಗತಿಪರ ಚಿಂತಕರ ಪರಂಪರೆಯ ಕರ್ನಾಟಕಕ್ಕೆ 'ಗೂಂಡಾರಾಜ್ಯ' ಎಂಬ ಖ್ಯಾತಿ ಪಡೆದಿರುವ ಉತ್ತರಪ್ರದೇಶ ಮಾದರಿ ಅಲ್ಲ, ಅಲ್ಲಿನ ಮುಖ್ಯಮಂತ್ರಿ ಪ್ರೇರಣೆಯೂ ಆಗಬಾರದು ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಲವ್ ಜಿಹಾದ್ ತಡೆ ಕುರಿತು ಟ್ವೀಟ್ ಮಾಡಿದ ಅವರು, ಲವ್ ಜಿಹಾದ್ ಎಂದರೆ ಏನು, ಅದರ ವ್ಯಾಖ್ಯಾನ ಏನು ಎನ್ನುವುದೇ ಸ್ಪಷ್ಟವಾಗದೇ ಇರುವಾಗ, ಅದರ ತಡೆಗೆ ಕಾನೂನು ರೂಪಿಸುವುದಕ್ಕೆ ಯಾವುದೇ ಅರ್ಥವಿಲ್ಲ. ಲವ್ ಜಿಹಾದ್ ತಡೆಗೆ ಕಾನೂನು ರೂಪಿಸುವ ಸರ್ಕಾರ ಅವರ ಘೋಷಣೆ, ಆಡಳಿತದ ವೈಫಲ್ಯದಿಂದ ಜನಮನವನ್ನು ಬೇರೆಡೆ ಸೆಳೆಯುವ ಹತಾಶ ಪ್ರಯತ್ನ. ಕೋಮುದ್ವೇಷವನ್ನು ಹುಟ್ಟುಹಾಕಿ ರಾಜಕೀಯದ ಬೇಳೆ ಬೇಯಿಸುವ ದುರುದ್ದೇಶವಲ್ಲದೇ ಬೇರೆ ಯಾವ ಸದುದ್ದೇಶ ಈ ಘೋಷಣೆಗೆ ಇಲ್ಲ ಎಂದು ಹೇಳಿದ್ದಾರೆ.
ಲವ್ ಜಿಹಾದ್ ಎಂದರೆ ಏನು ಎನ್ನುವುದೇ ಸ್ಪಷ್ಟ ಇಲ್ಲದೆ ಇರುವಾಗ, ಯಾವ ಕಾನೂನು ಕೂಡಾ ಲವ್ ಜಿಹಾದ್ ಅನ್ನು ವ್ಯಾಖ್ಯಾನಿಸಿಲ್ಲ ಎಂದು ಕೇಂದ್ರ ಗೃಹಸಚಿವಾಲಯವೇ ಸ್ಪಷ್ಟಪಡಿಸಿರುವಾಗ, ಕರ್ನಾಟಕ ಸರ್ಕಾರ ಯಾವ ಆಧಾರದಲ್ಲಿ ಕಾನೂನು ರೂಪಿಸಲು ಹೊರಟಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.