ಬೆಂಗಳೂರು, ನ. 07 (DaijiworldNews/MB) : ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವ ನಿರ್ಧಾರವನ್ನು ಘೋಷಿಸಿದ ಕೆಲವೇ ಗಂಟೆಗಳ ಬಳಿಕ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯೂಟರ್ನ್ ಹೊಡೆದಿದ್ದು ಪಟಾಕಿ ಬಳಕೆ, ಮಾರಾಟಕ್ಕೆ ''ಗ್ರೀನ್ ಸಿಗ್ನಲ್'' ನೀಡಿದ್ದಾರೆ.
ದೀಪಾವಳಿಯ ಸಂದರ್ಭದಲ್ಲಿ ''ಹಸಿರು ಪಟಾಕಿ''ಗಳನ್ನು ಮಾರಾಟ ಮಾಡಲು ಮತ್ತು ಬಳಸಲು ಜನರಿಗೆ ಅವಕಾಶವಿದೆ ಎಂದು ಒಂದು ಪುಟದ ಪತ್ರದ ಮೂಲಕ ಮುಖ್ಯಮಂತ್ರಿ ಕಚೇರಿ ಶುಕ್ರವಾರ ತಿಳಿಸಿದೆ.
"ಈ ದೀಪಾವಳಿಯ ಸಮಯದಲ್ಲಿ ನಾವು ಪಟಾಕಿಗಳನ್ನು ನಿಷೇಧಿಸಲು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಆದರೆ ಜನರು ಬಯಸಿದರೆ ಹಸಿರು ಪಟಾಕಿಗಳನ್ನು ಬಳಸಬಹುದು" ಎಂದು ತಿಳಿಸಲಾಗಿದೆ.
ಹಾಗೆಯೇ ಜನರು ಸರಳವಾಗಿ ಆಚರಣೆ ಮಾಡುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
"ನಾವು ಜನರ ಆರೋಗ್ಯದ ಹಿತದೃಷ್ಟಿಯಿಂದ ಮಾತ್ರ ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದು ಕೂಡಾ ಹೇಳಿದ್ದಾರೆ.
ಈ ಹಿಂದೆ ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು.
ಆರೋಗ್ಯ ತಜ್ಞರೊಂದಿಗೆ ಸರ್ಕಾರ ಈ ಬಗ್ಗೆ ಚರ್ಚಿಸಿದೆ. ಈ ಬಾರಿ ಪಟಾಕಿ ಬಳಕೆ ಒಳ್ಳೆಯದಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದಿದ್ದರು. "ರಾಜಸ್ಥಾನ, ಒಡಿಶಾ ಮತ್ತು ದೆಹಲಿ ಸೇರಿದಂತೆ ಹಲವಾರು ರಾಜ್ಯಗಳು ಈಗಾಗಲೇ ಪಟಾಕಿಗಳನ್ನು ನಿಷೇಧಿಸಲು ನಿರ್ಧರಿಸಿದೆ" ಎಂದು ಕೂಡಾ ಉಲ್ಲೇಖಿಸಿದ್ದರು.