ಮಡಿಕೇರಿ, ನ.06 (DaijiworldNews/PY): "ಬೆಂಗಳೂರು ಗಲಭೆ ಹಿನ್ನೆಲೆ ಶೀಘ್ರವೇ ಮಾಜಿ ಮೇಯರ್ ಸಂಪತ್ರಾಜ್ನ ಬಂಧನವಾಗಲಿದೆ" ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಈಗಾಗಲೇ ನಾಲ್ಕು ತಂಡಗಳು ಪ್ರಕರಣದ ಶೋಧನಾ ಕಾರ್ಯ ಕೈಗೊಂಡಿವೆ. ಪೊಲೀಸರು ಕೆಲವು ಮಾಹಿತಿಗಳ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ನನಗೆ ಈ ಬಗ್ಗೆ ವಿಶ್ವಾಸವಿದೆ. ಕೂಡಲೇ ಸಂಪತ್ರಾಜ್ನ ಬಂಧನವಾಗಲಿದೆ" ಎಂದಿದ್ದಾರೆ.
ವಿನಯ್ ಕುಲಕರ್ಣಿ ಬಂಧನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭ ನಮ್ಮ ಪಕ್ಷದ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಹತ್ಯೆ ನಡೆದಿದ್ದು, ಇದರ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಈ ವಿಚಾರವಾಗಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ಆದರೆ, ಸಿದ್ದರಾಮಯ್ಯ ಅವರು ಮಾತ್ರ ಹತಾಶೆಯ ಕಾರಣ ಇದನ್ನು ರಾಜಕೀಯ ದುರುದ್ದೇಶ ಎಂದು ಹೇಳುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
ಲವ್ ಜಿಹಾದ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕಳೆದ ದಶಕದಿಂದ ಲವ್ ಜಿಹಾದ್ ಹೆಚ್ಚಾಗಿದೆ. ವಿವಾಹಕ್ಕೆ ಮತಾಂತರ ಮುಖ್ಯವಲ್ಲ ಎಂದು ಅಲಹಾಬಾದ್ ಕೋರ್ಟ್ ಹೇಳಿದೆ. ರಾಜ್ಯದಲ್ಲೂ ಕೂಡಾ ಈ ವಿಚಾರವಾಗಿ ಕಾನೂನು ಮಾಡಲಾಗುವುದು" ಎಂದು ಹೇಳಿದ್ದಾರೆ.
ನಕ್ಸಲ್ ಚಟುವಟಿಕೆಯ ಬಗ್ಗೆ ಮಾತನಾಡಿದ ಅವರು, "ಕೇರಳ ಗಡಿ ಭಾಗದಲ್ಲಿ ನಕ್ಸಲ್ ಚಟುವಟಿಕೆಯ ಹಿನ್ನೆಲೆ, ಸದ್ಯ ಕೊಡಗಿನಲ್ಲಿಎರಡು ಕ್ಯಾಂಪ್ಗಳಿದ್ದು, ಇನ್ನೊಂದು ಕ್ಯಾಂಪ್ ಮಾಡಲು ಸೂಚನೆ ನೀಡಿದ್ದೇನೆ. ಅಲ್ಲದೇ, ಇನ್ನೊಂದು ಕ್ಯಾಂಪ್ಗಾಗಿ ಹಣಕಾಸಿನ ನೆರವು ನೀಡಲಾಗುವುದು. ಇಲ್ಲಿಗೆ ಅಗತ್ಯವಿರುವ ಸಿಬ್ಬಂದಿ ನೇಮಕಕ್ಕೂ ಕೂಡ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.