ಚಿಕ್ಕೋಡಿ, ನ.06 (DaijiworldNews/PY): "ದೀಪಾವಳಿ ಹಬ್ಬದ ಸಂದರ್ಭ ಪಟಾಕಿ ನಿಷೇಧ ಮಾಡುವುದು ತಪ್ಪು" ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮತಾಲಿಕ್ ಹೇಳಿದ್ದಾರೆ.
ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಟಾಕಿ ಹೊಡೆಯುವುದರಿಂದಲೇ ಪರಿಸರ ಮಾಲಿನ್ಯ ಆಗುತ್ತದೆ ಎನ್ನುವುದು ಸುಳ್ಳು. ದೀಪಾವಳಿ ಹಬ್ಬದ ವೇಳೆ ಧಾರ್ಮಿಕ ವಿಧಿ-ವಿಧಾನದಿಂದ ಅಚರಣೆ ನಡೆಯವುದರಿಂದ ಪಟಾಕಿಯನ್ನು ನಿಷೇಧ ಮಾಡಬಾರದು. ವಾಹನಗಳಿಂದ ಪರಿಸರ ಎಷ್ಟು ಮಾಲಿನ್ಯ ಆಗುತ್ತದೆ?. ಇದನ್ನು ನಿಯಂತ್ರಿಸಲು ಏಕೆ ಯಾರೂ ಕೂಡಾ ಪ್ರಯತ್ನ ಮಾಡುತ್ತಿಲ್ಲ. ಈಗ ಕಾನೂನು ಜಾರಿ ಮಾಡಲು ಸಿದ್ದವಾಗಿರುವವರು ಅರಣ್ಯ ಪ್ರದೇಶಗಳಿಗೆ ಒಮ್ಮೆ ಭೇಟಿ ನೀಡುವುದು ಒಳಿತು. ಏಕೆಂದರೆ, ಅಭಿವೃದ್ದಿಯ ಹೆಸರಿನಲ್ಲಿ ಎಷ್ಟು ಪರಿಸರವನ್ನು ನೀವು ನಾಶ ಮಾಡಿದ್ದೀರಿ ಎನ್ನುವುದು ತಿಳಿಯುತ್ತದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿನಯ್ ಕುಲಕರ್ಣಿ ಸಿಬಿಐ ಬಂಧನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಕಾನೂನು ಪ್ರಕಾರ ಅಪರಾಧಿ ಅಥವಾ ನಿರಪರಾಧಿ ಎನ್ನುವ ವಿಚಾರ ಸಾಬೀತಾಗಲಿ. ಖಚಿತ ಆಧಾರದ ಮೇರೆಗೆ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದಾರೆ. ಹತ್ಯೆ ಆರೋಪದ ಮೇರೆಗೆ ಜೈಲಿಗೆ ಹೋದರೆ ಆ ಜಾತಿಯವರು ನಮ್ಮವರು ಎಂದು ಹೇಳುವುದು ತಪ್ಪು. ಈ ವಿಚಾರವಾಗಿ ಪಂಚಮಸಾಲಿ ಸ್ವಾಮೀಜಿ ಅವರು ಗಂಭೀರವಾಗಿ ಯೋಚಿಸಬೇಕು. ವಿನಯ್ ಕುಲಕರ್ಣಿ ಅವರ ಪರ ನಿಂತಿರುವುದು ನಿಮ್ಮ ಮಠಕ್ಕೆ ಶೋಭೆ ತರುವುದಿಲ್ಲ" ಎಂದಿದ್ದಾರೆ.
ಎಂಇಎಸ್ ಮಾಜಿ ಶಾಸಕರ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, "ಬಿಜೆಪಿ ಅವರಿಗೆ ಅಧಿಕಾರ ಮಾತ್ರ ಬೇಕು. ಪಕ್ಷದಲ್ಲಿ ನೈತಿಕತೆ ಎನ್ನುವುದೇ ಇಲ್ಲ. ಸಿದ್ದರಾಮಯ್ಯ, ಸೋನಿಯಾ ಗಾಂಧಿ ಬಂದರೂ ಕೂಡಾ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.