ತಿರುವನಂತಪುರ,ನ. 06 (DaijiworldNews/HR): ಕೇರಳ ಸರ್ಕಾರ ಹತ್ತು ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ಕೇಂದ್ರ ಸರ್ಕಾರದಿಂದ ಸಾಕ್ಷರತಾ ಆಂದೋಲನಕ್ಕಾಗಿ ಅನುದಾನ ಪಡೆಯಲಿದೆ.
ಸಾಂಧರ್ಭಿಕ ಚಿತ್ರ
2030ರ ವೇಳೆಗೆ ಭಾರತದಾದ್ಯಂತ ಅನಕ್ಷರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವಾಕಾಂಕ್ಷೆಯ 'ಫಡ್ನಾ ಲಿಖ್ನಾ' ಅಭಿಯಾನ ಆರಂಭಿಸಿದ್ದು, ಈ ಅಭಿಯಾನದಡಿ ಕೇರಳ ಸರ್ಕಾರವು ಕೇಂದ್ರದ ಅನುದಾನ ಪಡೆಯಲಿದೆ ಎಂದು ತಿಳಿದು ಬಂದಿದೆ.
ಕೇರಳವು ಶೇ 100ರಷ್ಟು ಸಾಕ್ಷರತಾ ಪ್ರಮಾಣ ಸಾಧಿಸಿದ ರಾಜ್ಯವಾಗಿದ್ದು, ಇದೀಗ ಹತ್ತು ವರ್ಷಗಳ ಬಳಿಕ ಸಾಕ್ಷರತಾ ಯೋಜನೆಗಾಗಿ ಕೇಂದ್ರದಿಂದ ನಿಧಿಯನ್ನು ಸ್ವೀಕರಿಸುತ್ತಿದೆ.
ಈ ಕುರಿತು ಮಾಹಿತಿ ನೀಡಿದ ಕೆಎಸ್ಎಲ್ಎಂಎ ನಿರ್ದೇಶಕ ಪಿ.ಎಸ್.ಶ್ರೀಕಲಾ, ಕೇರಳವೂ ಕೇಂದ್ರ ಸರ್ಕಾರದ ಹೊಸ 'ಫಡ್ನಾ ಲಿಖ್ನಾ' ಅಭಿಯಾನದ ಭಾಗವಾಗಿದ್ದು, ಇದು ಒಟ್ಟು 4.74 ಕೋಟಿ ಮೌಲ್ಯದ ಯೋಜನೆ ಪಡೆಯಲಿದೆ ಎಂದು ತಿಳಿಸಿದ್ದಾರೆ.
ಇನ್ನು ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳೆಂದು ಗುರುತಿಸಲಾಗಿರುವ ವಯನಾಡ್, ಇಡುಕ್ಕಿ, ಪಾಲಕ್ಕಾಡ್ ಹಾಗೂ ಮಲಪ್ಪುರಂಗಳಲ್ಲಿ 1.15 ಲಕ್ಷ ಅನಕ್ಷರಸ್ಥರಿದ್ದು, ಅಲ್ಲಿ ಮೊದಲ ಹಂತದಲ್ಲಿ ಅಭಿಯಾನ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.