ಲಕ್ನೋ, ನ. 06 (DaijiworldNews/MB) : ಈ ವರ್ಷದ ಆರಂಭದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರಚಾರ ಮಾಡಿದ ಕಾರ್ಯಕರ್ತರ ಛಾಯಾಚಿತ್ರವಿರುವ ಪೋಸ್ಟರ್ ಲಕ್ನೋ ಆಡಳಿತ ಮತ್ತೊಮ್ಮೆ ಹಾಕಿದೆ.
ಗುರುವಾರ ಈ ಪೋಸ್ಟರ್ ಹಾಕಲಾಗಿದ್ದು ಈ ಪೋಸ್ಟರ್ನಲ್ಲಿ ಇರುವವರ ಮಾಹಿತಿ ನೀಡಿದವರಿಗೆ 5,000 ರೂ. ನೀಡುವುದಾಗಿ ಘೋಷಿಸಲಾಗಿದೆ.
ಎಂಟು ಸಿಎಎ ವಿರೋಧಿ ಕಾರ್ಯಕರ್ತರ ಛಾಯಾಚಿತ್ರಗಳೊಂದಿಗೆ 'ವಾಂಟೆಡ್' ಎಂದು ಬರೆಯಲಾದ ಪೋಸ್ಟರ್ನಲ್ಲಿ ಈ ಛಾಯಾಚಿತ್ರದಲ್ಲಿರುವವರು 'ಪರಾರಿಯಾಗಿದ್ದಾರೆ' ಎಂದು ಬರೆಯಲಾಗಿದೆ. ಹಾಗೆಯೇ ಅವರ ಹೆಸರು ಹಾಗೂ ವಿಳಾಸಗಳನ್ನು ಕೂಡಾ ಹಾಕಲಾಗಿದೆ. ಅಷ್ಟೇ ಅಲ್ಲದೇ ಹಳೆ ನಗರ ಪ್ರದೇಶದಲ್ಲಿ ಧ್ವನಿವರ್ಧಕದಲ್ಲಿ ಈ ಪ್ರತಿಭಟನಕಾರರ ಬಗ್ಗೆ ಪ್ರಕಟಣೆ ಸಹ ಮಾಡಲಾಗಿದೆ.
ಆರೋಪಿಗಳಲ್ಲಿ ಒಬ್ಬರು ಶಿಯಾ ಪಾದ್ರಿ ಮೌಲಾನಾ ಸೈಫ್ ಅಬ್ಬಾಸ್ ಆಗಿದ್ದಾರೆ. ಮೊಹಮ್ಮದ್ ಆಲಂ, ಮೊಹಮ್ಮದ್ ತಾಹಿರ್, ರಿಜ್ವಾನ್, ರಫತ್ ಅಲಿ, ಅಹ್ಸಾನ್, ಇರ್ಷಾದ್, ಹಸನ್ ಮತ್ತು ಇರ್ಷಾದ್ ಎಂಬವರ ಫೋಟೋ ಹಾಕಿ ಆರೋಪಿಗಳು ಎಂದು ಉಲ್ಲೇಖಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ 2019 ರ ಡಿಸೆಂಬರ್ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಅವರ ವಿರುದ್ದ ಗಲಭೆ ಆರೋಪ ಮಾಡಲಾಗಿದೆ.
ಆರೋಪಿಗಳೆಲ್ಲರೂ ಹಳೆ ಲಕ್ನೋನ ಠಾಕೂರ್ಗಂಜ್ ಪ್ರದೇಶದವರು. ಈ ಪೋಸ್ಟರ್ಗಳಲ್ಲಿ ಠಾಕೂರ್ಗಂಜ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ಸಹ ನೀಡಲಾಗಿದ್ದು, ಈ ಆರೋಪಿಗಳ ಮಾಹಿತಿ ತಿಳಿದ್ದಲ್ಲಿ ಈ ನಂಬರ್ಗೆ ತಿಳಿಸಿ ಎಂದು ಬರೆಯಲಾಗಿದೆ.
ಆರೋಪಿಗಳ ವಿರುದ್ಧ ದರೋಡೆ ಹಾಗೂ ಸಮಾಜ ವಿರೋಧಿ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ 1986 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
''2019 ರಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಕಾರ್ಯಕರ್ತರು ಹಿಂಸಾಚಾರದಲ್ಲಿ ಭಾಗಿಯಾಗಿದ್ದರು ಮತ್ತು ಅಂದಿನಿಂದ ಕಾಣೆಯಾಗಿದ್ದಾರೆ. ಅವರು ಭೇಟಿಯಾಗುವ ಸಾಧ್ಯತೆಯಿರುವ ಎಲ್ಲೆಡೆ ಆರೋಪಿಗಳ ಚಿತ್ರಗಳನ್ನು ಹಾಕಲಾಗಿದೆ. ಆರೋಪಿಗಳ ಮನೆಗಳ ಬಳಿ ಪೋಸ್ಟರ್ ಮತ್ತು ನೋಟಿಸ್ ಕೂಡ ಹಾಕಲಾಗಿದೆ'' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಈ ಪೋಸ್ಟರ್ಗಳನ್ನು ಹಾಕಿರುವುದಕ್ಕೆ ಅಲ್ಲಿನ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದು ಪೋಸ್ಟರ್ಗಳನ್ನು ಹಾಕಿರುವುದು 'ಅನೈತಿಕ' ಮತ್ತು 'ಕಾನೂನಿನ ದುರುಪಯೋಗ' ಎಂದು ಹೇಳಿದ್ದಾರೆ.
''ಪೋಸ್ಟರ್ಗಳಲ್ಲಿ ಕಾಣಿಸಿಕೊಂಡ ಕೆಲವರು ಮಾಡಿರುವ ಆರೋಪಗಳು ಇನ್ನೂ ಸಾಬೀತಾಗಿಲ್ಲವಾದ್ದರಿಂದ ಅವರಿಗೆ ಸಾರ್ವಜನಿಕ ಅವಮಾನ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ'' ಎಂದು ಹೇಳಿದ್ದಾರೆ.
ಈ ವರ್ಷದ ಮಾರ್ಚ್ನಲ್ಲಿ ರಾಜ್ಯ ಸರ್ಕಾರವು ರಾಜ್ಯ ರಾಜಧಾನಿಯಲ್ಲಿ 53 ಸಿಎಎ ವಿರೋಧಿ ಪ್ರತಿಭಟನಾಕಾರರ ಛಾಯಾಚಿತ್ರವಿರುವ ಪೋಸ್ಟರ್ ಹಾಕಿದ್ದು ಆ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್, ಪೋಸ್ಟರ್ ಹಾಕುವುದು 'ಜನರ ಗೌಪ್ಯತೆಗೆ ಅನಗತ್ಯ ಹಸ್ತಕ್ಷೇಪ' ಮತ್ತು ಸಂವಿಧಾನವನ್ನು ಉಲ್ಲಂಘಿಸಿದೆ ಎಂದು ಹೇಳಿತ್ತು.
ಸಿಎಎ ಕಾಯ್ದೆಯನ್ನು ಡಿಸೆಂಬರ್ 11, 2019 ರಂದು ಸಂಸತ್ತು ಅಂಗೀಕರಿಸಿದ್ದು ಇದು ಭಾರತದಾದ್ಯಂತ ಪ್ರತಿಭಟನೆ ಮತ್ತು ಯುಪಿಯಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು. ಪ್ರತಿಭಟನೆ ವೇಳೆ ಉತ್ತರ ಪ್ರದೇಶದಾದ್ಯಂತ ಕನಿಷ್ಠ 23 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ಹಲವು ಪ್ರತಿಭಟನಾಕಾರರ ವಿರುದ್ದ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.