ಬೆಂಗಳೂರು, ನ. 06 (DaijiworldNews/MB) : ''ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಸರ್ಕಾರ ಮತ್ತೊಂದು ಪ್ರಯತ್ನ ಮಾಡಿದ್ದು ಈಗ ಲವ್ ಜಿಹಾದ್ಗೆ ಕಾನೂನು ತರುವ ಬಗ್ಗೆ ಚರ್ಚೆ ನಡೆಸುತ್ತಿದೆ'' ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಅವರು ಸರ್ಕಾರದ ವಿರುದ್ದ ಆರೋಪ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಲವ್ ಜಿಹಾದ್ ಎಂಬುದು ಆರ್ಎಸ್ಎಸ್ ಮತ್ತು ಬಿಜೆಪಿ ರಚಿಸಿದ ಬೋಗಸ್. ಇಲ್ಲಿಯವರೆಗೆ ಯಾವುದೇ ಲವ್ ಜಿಹಾದ್ ಪ್ರಕರಣಗಳು ದಾಖಲಾಗಿಲ್ಲ, ಯಾವುದೇ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಲವ್ ಜಿಹಾದ್ ಪ್ರಕರಣವನ್ನು ಇನ್ನೂ ಪತ್ತೆ ಮಾಡಿಲ್ಲ ಎಂದು ಸ್ವಂತ ಸರ್ಕಾರವು ಸಂಸತ್ತಿನಲ್ಲಿ ಒಪ್ಪಿಕೊಂಡಿದೆ. ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ಮಾಡಿದ ಮತ್ತೊಂದು ಪ್ರಯತ್ನವಿದು'' ಎಂದು ದೂರಿದ್ದಾರೆ.
ಕರ್ನಾಟಕದಲ್ಲಿ ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿಗೆ ತರುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದ್ದು ಮಂಗಳೂರಿನಲ್ಲಿ ನಡೆದ ಬಿಜೆಪಿಯ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು "ಲವ್ ಜಿಹಾದ್ ಹೆಸರಲ್ಲಿ ಮತಾಂತರವಾಗುತ್ತಿದೆ. ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚಿಸಲಾಗುತ್ತಿದೆ. ಕರ್ನಾಟಕದಲ್ಲಿ ಈ ವ್ಯವಸ್ಥೆ ಕೊನೆ ಮಾಡುತ್ತೇವೆ. ಮತಾಂತರದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ" ಎಂದು ತಿಳಿಸಿದ್ದರು.