ಮಂಗಳೂರು, ನ. 05 (DaijiworldNews/SM): ರಾಜ್ಯದಲ್ಲಿ ಈ ಹಿಂದೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸಂಪುಟ ವಿಸ್ತರಣೆ ವಿಚಾರವನ್ನು ಉಪಚುನಾವಣೆಯ ಫಲಿತಾಂಶದ ಬಳಿಕ ಕೈಗೆತ್ತಿಕೊಳ್ಳಲಾಗುವುದೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಬಳಿಕ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನವೆಂಬರ್ 10 ರಂದು ವಿಧಾನಸಭಾ ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಈ ಸಂಬಂಧ ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸುತ್ತೇನೆ. ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಬಳಿಕ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದೆಂದಿದ್ದಾರೆ.
ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಈ ಹಿಂದೆ ಹೈಕಮಾಂಡ್ ಮನಸ್ಸು ಮಾಡದೇ ಇದ್ದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಬೇಕಿದ್ದ ಸಂಪುಟ ವಿಸ್ತರಣೆ ಮುಂದೂಡಲಾಗಿತ್ತು. ಇದೀಗ ಉಪಚುನಾವಣೆಯ ಬಳಿಕ ಈ ವಿಚಾರ ಮತ್ತೆ ಮುನ್ನೆಲೆಗೆ ಬರಲಿದೆ.