ಚಿತ್ರದುರ್ಗ, ನ.05 (DaijiworldNews/PY): "ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರ ಸಿಬಿಐ ವಿಚಾರಣೆ ರಾಜಕೀಯ ಪ್ರೇರಿತವಾಗಿದೆ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ವಿನಯ್ ಕುಲಕರ್ಣಿಯೊಂದಿಗೆ ಮಾತನಾಡಿದ್ದು, ಏನೂ ತಪ್ಪು ಮಾಡಿಲ್ಲ ಎಂದು ತಿಳಿಸಿದ್ದಾನೆ. ವಿಚಾರಣೆ ಹಂತದಲ್ಲಿರುವ ಸಂದರ್ಭ ಏನೂ ಹೇಳುವುದಿಲ್ಲ" ಎಂದು ತಿಳಿಸಿದರು.
ಕೊರೊನಾ ಲಸಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, "ಕೊರೊನಾ ಸೋಂಕಿಗೆ ಲಸಿಕೆ ಬರುವ ತನಕ ಗ್ರಾ.ಪಂ ಚುನಾವಣೆ ಸೇರಿದಂತೆ ಶಾಲೆಗಳನ್ನು ಆರಂಭ ಮಾಡುವುದು ಉತ್ತಮವಲ್ಲ. ಪ್ರಸ್ತುತ ವರ್ಷ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು" ಎಂದರು.
ಸಿಎಂ ಬಿಎಸ್ವೈ ಪುತ್ರ ಬಿ.ಬೈ ವಿಜಯೇಂದ್ರ ಅವರ ಬಗ್ಗೆ ಮಾತನಾಡಿದ್ದು, "ರಾಜ್ಯದಲ್ಲಿ ಸದ್ಯ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಆರ್ಥಿಕ ಸ್ಥಿತಿ ಹದಗೆಟ್ಟಿದೆ" ಎಂದು ಹೇಳಿದರು.
ನಳಿನ್ ಕುಮಾರ್ ಕಟೀಲ್ ಬಗ್ಗೆ ಮಾತನಾಡಿದ ಅವರು, "ಆತ ಪ್ರಬುದ್ಧನಾಗಿದ್ದು, ಆತನ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ" ಎಂದು ಲೇವಡಿ ಮಾಡಿದರು.