ಬೆಂಗಳೂರು, ನ.05 (DaijiworldNews/PY): "ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿರುವ ವಿಚಾರವಾಗಿ ರಾಜಕೀಯ ಬಣ್ಣ ಬಳಿಯುವುದು ತಪ್ಪು" ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ ಅವರ ಮೇಲೆ ಆರೋಪವಿತ್ತು. ಈ ವಿಚಾರವಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ವಿನಯ್ ಕುಲಕರ್ಣಿ ಅವರ ವಿರುದ್ದ ಸಾಕಷ್ಟು ಹೋರಾಟಗಳು ನಡೆದಿದ್ದವು. ಹೋರಾಟಕ್ಕೆ ಮಣಿದು ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಈ ವಿಚಾರವಾಗಿ ಬಿಜೆಪಿಯ ಪಾತ್ರ ಏನಿದೆ?" ಎಂದು ಕೇಳಿದ್ದಾರೆ.
"ಯಾರ ಮೇಲೆಯಾದರು ಇ.ಡಿ. ಸಿಬಿಐ ದಾಳಿಯಾದರೆ, ಅಲ್ಲದೇ ಬಂಧಿಸಿದರೆ ಅವೆಲ್ಲಕ್ಕೂ ರಾಜಕೀಯ ದ್ವೇಷ ಎಂದು ಬಣ್ಣ ಬಳಿದು ಬಿಜೆಪಿ ಮೇಲೆ ಆರೋಪ ಮಾಡುವುದು ಸೂಕ್ತವಲ್ಲ" ಎಂದು ತಿಳಿಸಿದ್ದಾರೆ.
ಉಪಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಶಿರಾ ಹಾಗೂ ಆರ್.ಆರ್.ನಗರ ಈ ಎರಡೂ ಕ್ಷೇತ್ರದಲ್ಲಿ ಈ ಬಾರಿ ಕಮಲ ಮೇಲುಗೈ ಸಾಧಿಸಲಿದೆ" ಎಂದು ಹೇಳಿದ್ದಾರೆ.