ನವದೆಹಲಿ, ನ.05 (DaijiworldNews/PY): "ಯುದ್ದವನ್ನು ತಡೆಯುವ ಸಾಮರ್ಥ್ಯದ ಮೂಲಕವೇ ಶಾಂತಿಯನ್ನು ಖಚಿತಪಡಿಸಿಕೊಳ್ಳಬೇಕು. ಏಕಪಕ್ಷೀಯತೆ ಹಾಗೂ ಆಕ್ರಮಣಶೀಲತೆಯ ಹಿನ್ನೆಲೆ ಭಾರತ ತನ್ನ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ತೀರ್ಮಾನಿಸಿದೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಷ್ಟ್ರೀಯ ರಕ್ಷಣಾ ಕಾಲೇಜಿನ ವಜ್ರ ಮಹೋತ್ಸವ ಸಂಭ್ರಮಾಚರಣೆಯ ಸಂದರ್ಭ ಮಾತನಾಡಿದ ಅವರು, "ಇತ್ತೀಚೆಗೆ ಭಾರತವು ಗಡಿ ಸಮಸ್ಯೆಯನ್ನು ಎದುರಿಸುತ್ತಿದೆ. ಭಾರತ ಶಾಂತಿ ಪ್ರಿಯ ದೇಶ. ಭಾರತವು ಮಾತುಕತೆಯ ಮುಖೇನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಇಚ್ಛಿಸುತ್ತದೆ. ಅಲ್ಲದೇ, ಗಡಿಯುದ್ದಕ್ಕೂ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ವಿವಿಧ ಒಪ್ಪಂದಗಳನ್ನು ಗೌರವಿಸಲು ಸದಾ ಸಿದ್ದ" ಎಂದಿದ್ದಾರೆ.
"ಅಮೇರಿಕಾದೊಂದಿಗಿನ ನಮ್ಮ ಕಾರ್ಯತಂತ್ರದ ಪಾಲುದಾರಿಕೆ ಹಿಂದೆಂದಿಗಿಂತಲೂ ಪ್ರಬಲವಾಗಿದೆ. ಫ್ರಾನ್ಸ್ ಹಾಗೂ ಇಸ್ರೇಲ್ನೊಂದಿಗೆ ಭಾರತವು ವಿಶೇಷವಾದ ಪಾಲುದಾರಿಕೆಯನ್ನು ರೂಪಿಸಿದೆ" ಎಂದು ಹೇಳಿದ್ದಾರೆ.