ಬೆಂಗಳೂರು, ನ.05 (DaijiworldNews/PY): "ಕೊರೊನಾ ಸೋಂಕು ಹಾಗೂ ನೆರೆ ಹಾವಳಿಯಿಂದ ತತ್ತರಿಸಿರುವ ಜನತೆಯ ಮೇಲೆ ಕನಿಷ್ಠ ಒಂದು ವರ್ಷ ವಿದ್ಯುತ್ ದರ ಏರಿಕೆಯ ಬರೆ ಹಾಕಬಾರದು" ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೊರೊನಾ ಸೋಂಕು ಹಾಗೂ ನೆರೆ ಹಾವಳಿಯಿಂದ ತತ್ತರಿಸಿರುವ ಜನತೆಯ ಮೇಲೆ ಕನಿಷ್ಠ ಒಂದು ವರ್ಷ ವಿದ್ಯುತ್ ದರ ಏರಿಕೆಯ ಬರೆ ಹಾಕಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ" ಎಂದಿದ್ದಾರೆ.
"ಕೊರೊನಾ ಸೋಂಕು ತಗುಲಿದ ನಂತರ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲಾ ವಲಯಗಳು ನಷ್ಟದ ಸುಳಿಗೆ ಸಿಲುಕಿವೆ. ಜನತೆ ಉದ್ಯೋಗ, ವೇತನ ಇಲ್ಲದೆ ಕಂಗಾಲಾಗಿದ್ದಾರೆ. ವಿದ್ಯುತ್ ದರ ಏರಿಕೆಯನ್ನು ಮುಂದೂಡುವುದು ಒಳಿತು" ಎಂದು ತಿಳಿಸಿದ್ದಾರೆ.
"ಪ್ರತಿ ಯೂನಿಟ್ಗೆ 20 ಪೈಸೆಯಿಂದ 50 ಪೈಸೆವರೆಗೆ, ಸರಾಸರಿ 40 ಪೈಸೆ ಹೆಚ್ಚಳ ಮಾಡಿರುವುದು ಜನರಿಗೆ ಮತ್ತಷ್ಟು ಹೊರೆಯಾಗಲಿದೆ. ಒಂದು ವರ್ಷ ಕಾಲ ದರ ಏರಿಕೆ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸುತ್ತೇನೆ" ಎಂದು ಹೇಳಿದ್ದಾರೆ.