ನವದೆಹಲಿ, ನ.05 (DaijiworldNews/PY): ಕೊರೊನಾ ನಿಯಂತ್ರಣಕ್ಕೆ ಮನುಷ್ಯರ ಮೇಲೆ ಸೋಂಕು ನಿವಾರಕ ಹಾಗೂ ನೇರಳಾತೀತ ಕಿರಣಗಳ ಉಪಯೋಗದ ನಿಷೇಧಕ್ಕೆ ನಿರ್ದೇಶನ ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ ನೀಡಿದೆ.
ಈ ವಿಚಾರದ ಸಂಬಂಧ ಒಂದು ತಿಂಗಳೊಳಗೆ ಅಗತ್ಯವಾದ ಕ್ರಮ ತೆಗೆದುಕೊಳ್ಳುವಂತೆ ನ್ಯಾ.ಅಶೋಕ್ ಭೂಷಣ್ ಅವರ ನೇತೃತ್ವದ ಪೀಠ ಹೇಳಿದೆ.
ಈ ಬಗ್ಗೆ ಗುರ್ಸಿಮ್ರಾನ್ ಸಿಂಗ್ ಎಂಬವರು ಸುಪ್ರೀಂಗೆ ಪಿಐಎಲ್ ಅರ್ಜಿ ಸಲ್ಲಿಸಿದ್ದು, "ಕೊರೊನಾ ನಿಯಂತ್ರಣಕ್ಕೆ ಮನುಷ್ಯರ ಮೇಲೆ ಸೋಂಕು ನಿವಾರಕ, ನೇರಳಾತೀತ ಕಿರಣಗಳ ಬಳಕೆ ಸೇರಿದಂತೆ ಧೂಮೀಕರಣ ಮಾಡುವುದು ಹಾಗೂ ಇವುಗಳನ್ನು ಬಳಕೆ ಮಾಡುವಂತೆ ಜಾಹೀರಾತು ನೀಡಿವುದನ್ನು ನಿಷೇಧ ಮಾಡಬೇಕು" ಎಂದು ತಿಳಿಸಿದ್ದರು.
ಈ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂ, ಒಂದು ತಿಂಗಳೊಳಗೆ ಅಗತ್ಯವಾದ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
ಸೋಂಕು ನಿವಾರಕಗಳ ಸಿಂಪಡಣೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಹಾನಿಕಾರಕ ಎಂದು ತಿಳಿದಿದ್ದರೂ ಕೂಡಾ, ಈ ಸೋಂಕು ನಿವಾರಕ ಸುರಂಗಗಳ ಉಪಯೋಗವನ್ನು ಏಕೆ ನಿಷೇಧ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ಸೆ.7ರಂದು ಕೇಂದ್ರವನ್ನು ಪ್ರಶ್ನಿಸಿತ್ತು.
ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂನ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದು, "ಕೊರೊನಾ ಸೋಂಕು ನಿರ್ವಹಣೆಗೆ ನೇರಾಳತೀತ ಕಿರಣಗಳ ಬಳಕೆಯ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಯಾವ ಸಲಹೆ ಹಾಗೂ ಮಾರ್ಗಸೂಚಿಯನ್ನು ಕೊಟ್ಟಿಲ್ಲ" ಎಂದು ಹೇಳಿದ್ದರು.