ಬೆಂಗಳೂರು, ನ. 05 ( DaijiworldNews/HR): ಕರ್ನಾಟಕದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವುದು ಬಿಜೆಪಿ ಸರ್ಕಾರವಲ್ಲ, ಹೊರತಾಗಿ ಕಾಂಗ್ರೆಸ್-ಬಿಜೆಪಿ ಸರಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪಕ್ಷ ಸೇರ್ಪಡೆ ವೇಳೆ `ಕೈ' ನಾಯಕರೊಬ್ಬರು ಬಿಜೆಪಿಯಲ್ಲಿ ಇಂಧನ ಖಾತೆ ಸಚಿವನಾಗಬೇಕು ಎಂದು ಹಾರೈಸಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಸರಕಾರವಲ್ಲ, ಕಾಂಗ್ರೆಸ್-ಬಿಜೆಪಿ ಸರಕಾರ ಎಂದು ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ನಾಟಕ ಮತ್ತು ಸಿನಿಮಾ ಮಾಡುತ್ತಾರೆ. ಆದರೆ, ನಾವು ಅವರಂತೆ ಮಾಡುವುದಿಲ್ಲ. ಹೀಗಾಗಿ ನಮ್ಮದು ಒಂದೇ ಟೇಕ್, ನಮ್ಮಲ್ಲಿ ಯಾವುದೇ ರೀತಿಯ ಕಟ್ ಆಂಡ್ ಪೇಸ್ಟ್ ಇಲ್ಲ. ಇದೇ ನಮಗೂ ಮುನಿರತ್ನಗೂ ಇರುವ ವ್ಯತ್ಯಾಸ ಎಂದು ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ರಾಜ್ಯದಲ್ಲಿನ ಪ್ರಸ್ತುತ ಪರಿಸ್ಥಿತಿ ನೋಡಿ ಮತ ಹಾಕಲು ಹಿಂಜರಿದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅನೇಕರು ಮನವಿ ಮಾಡಿದರೂ ಮತದಾನ ಮಾಡಿಲ್ಲ. ಶಿರಾ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಮತದಾರರ ಮೇಲೆ ವಿಶ್ವಾಸ ಇದೆ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.
ಇನ್ನು ಎರಡು ಕ್ಷೇತ್ರದಲ್ಲಿ ಚುನಾವಣಾ ಆಯೋಗ ನಾವು ಕೊಟ್ಟ ದೂರುಗಳ ಬಗ್ಗೆ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಕೆಲವೊಂದು ಕ್ರಮ ಕೈಗೊಂಡಿದ್ದಾರೆ. ಚುನಾವಣಾ ಅಕ್ರಮಗಳ ಬಗ್ಗೆ ನಾವು ಕೊಟ್ಟ ದೂರನ್ನು ಸೂಕ್ತ ರೀತಿಯಲ್ಲಿ ಗಮನಿಸಿದ್ದಾರೆ ಎಂದರು.