ಹೈದರಾಬಾದ್, ನ. 05 (DaijiworldNews/MB) : ಸಂಚಾರದಟ್ಟಣೆಯಾಗಿದ್ದ ಸಂದರ್ಭದಲ್ಲಿ ಟ್ರಾಫಿಕ್ ತೆರವುಗೊಳಿಸಲು ಹೈದರಾಬಾದ್ನ ಟ್ರಾಫಿಕ್ ಕಾನ್ಸ್ಟೆಬಲ್ ಒಬ್ಬರು ಸುಮಾರು ಎರಡು ಕಿ.ಮೀ ಓಡಿದ ಘಟನೆ ನಡೆದಿದ್ದು ಅವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದೆ.
ಅಪರಿಚಿತ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದ ಟ್ರಾಫಿಕ್ ಕಾನ್ಸ್ಟೆಬಲ್ ಜಿ. ಬಾಬ್ಜಿ ಅವರ ವಿಡಿಯೋ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸೋಮವಾರ ಈ ಘಟನೆಯು ಅಬಿಡ್ಸ್ ಜಿಪಿಒ ಜಂಕ್ಷನ್ ಹಾಗೂ ಆಂಧ್ರ ಬ್ಯಾಂಕ್ ಕೋಟಿ ನಡುವಿನಲ್ಲಿ ನಡೆದಿದೆ. ಆದರೆ ಈ ಘಟನೆಯ ವಿಡಿಯೋವನ್ನು ಪೊಲೀಸರು ಬುಧವಾರ ಪೋಸ್ಟ್ ಮಾಡಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ಅಪರಿಚಿತ ರೋಗಿಯೋರ್ವ ಆಂಬುಲೆನ್ಸ್ನಲ್ಲಿದ್ದು ಜಿಪಿಒ ಜಂಕ್ಷನ್ನಿಂದ ಕೋಟಿ ಕಡೆಗೆ ಹೋಗುವ ಚಾಲಕರ ಬಳಿ ಈ ಆಂಬುಲೆನ್ಸ್ಗೆ ದಾರಿ ಮಾಡಿಕೊಡಲು ಕಾನ್ಸ್ಟೆಬಲ್ ಹೇಳಿದ್ದಾರೆ. ಹಾಗೆಯೇ ಆಂಬುಲೆನ್ಸ್ಗೆ ದಾರಿ ಮಾಡಿಕೊಡುತ್ತಾ ತನ್ನ ಪೊಲೀಸ್ ಠಾಣೆಯ ವ್ಯಾಪ್ತಿಯನ್ನು ಮೀರಿ ಓಡಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.
ಬಾಬ್ಜಿಯವರ ಈ ಪ್ರಯತ್ನವನ್ನು ವಾಹನ ಚಾಲಕರು ಶ್ಲಾಘಿಸಿದ್ದು ಸಂಚಾರದಟ್ಟನೆಯಲ್ಲಿ ಸಿಲುಕಿದ್ದರೂ ಕೂಡಾ ಚಪ್ಪಾಳೆ ತಟ್ಟಿ ಬಾಬ್ಜಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾನ್ಸ್ಟೆಬಲ್ ಬಾಬ್ಜಿ ಅವರು, "ಸಾರ್ವಜನಿಕರಿಂದ ದೊರೆತ ಮೆಚ್ಚುಗೆ ನನಗೆ ಅಪಾರ ತೃಪ್ತಿಯನ್ನು ನೀಡಿದೆ. ಆಂಬ್ಯುಲೆನ್ಸ್ ಹಾದುಹೋಗುವ ಮಾರ್ಗವನ್ನು ನಾನು ತೆರವುಗೊಳಿಸಿರುವುದು ನನಗೆ ಸಂತೋಷವಾಗಿದೆ. ರೋಗಿ ಯಾರು ಮತ್ತು ಅವರನ್ನು ಯಾವ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ನನಗೆ ತಿಳಿದಿಲ್ಲ" ಎಂದು ಹೇಳಿದರು.
ಇನ್ನು ಬಾಬ್ಜಿ ಕಾರ್ಯವನ್ನು ಶ್ಲಾಘಿಸಿ ಟ್ವೀಟ್ ಮಾಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಅನಿಲ್ ಕುಮಾರ್, "ಆಬಿಡ್ಸ್ ಟ್ರಾಫಿಕ್ನ ಹೆಚ್ಟಿಪಿ ಅಧಿಕಾರಿ ಬಾಬ್ಜಿ ಆಂಬುಲೆನ್ಸ್ಗೆ ದಾರಿಮಾಡಿಕೊಡುತ್ತಿದ್ದಾರೆ. ಉತ್ತಮ ಕಾರ್ಯ ಹೆಚ್ಟಿಪಿ, ಇದು ನಾಗರಿಕರ ಸೇವೆ" ಎಂದು ಹೇಳಿದ್ದಾರೆ.