ಬೆಂಗಳೂರು, ನ. 05 ( DaijiworldNews/HR): 2016ರಲ್ಲಿ ನಡೆದಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ.
ಮೊದಲಿಗೆ ಧಾರವಾಡದ ಬಾರಾಕೊಟ್ರಿ ಪ್ರದೇಶದಲ್ಲಿನ ನಿವಾಸದಲ್ಲಿ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಕೆಲ ಕಾಲ ವಶಕ್ಕೆ ಪಡೆದಿದ್ದು, ಇದೀಗ ಧಾರವಾಡ ಉಪ ನಗರ ಪೊಲೀಸ್ ಠಾಣೆಯಲ್ಲಿ ಸಿಬಿಐ ಪೊಲೀಸರು ವಿಚಾರಣೆಗೆ ಒಳಪಡಿದ್ದಾರೆ.
ಇನ್ನು ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆಗ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರೂ ಆಗಿದ್ದ ವಿನಯ್ ಕುಲಕರ್ಣಿ ಅವರ ಹೆಸರು ಕೇಳಿ ಬಂದಿತ್ತು. ಕಂದಾಯ ಸಚಿವ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಬಿಜೆಪಿ ನಾಯಕರು, ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರು ಶಾಮಿಲಾಗಿದ್ದಾರೆ ಎಂದು ಆರೋಪಿಸಿದ್ದರು.
ಕೆಲ ತಿಂಗಳುಗಳ ಹಿಂದಷ್ಟೇ ವಿನಯ್ ಕುಲಕರ್ಣಿ ಅವರ ಸಹೋದರ ವಿಜಯ್ ಕುಲಕರ್ಣಿ ಅವರು ಸಿಬಿಐ ವಿಚಾರಣೆ ಎದುರಿಸಿದ್ದು, ಇನ್ನು ಈ ಪ್ರಕರಣದಿಂದ ಬಚಾವಾಗಲು ವಿನಯ್ ಕುಲಕರ್ಣಿ ಅವರು ಬಿಜೆಪಿ ಸೇರಲು ಪ್ರಯತ್ನ ನಡೆಸಿದ್ದಾರೆಂದು ಆರೋಪಿಸಲಾಗಿತ್ತು ಮತ್ತು ಆ ಆರೋಪವನ್ನು ವಿನಯ್ ಕುಲಕರ್ಣಿ ನಿರಾಕರಿಸಿದ್ದರು.