ನವದೆಹಲಿ,ನ. 04 (DaijiworldNews/HR): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಿಪಬ್ಲಿಕ್ ಸುದ್ದಿ ವಾಹಿನಿಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ವಶಕ್ಕೆ ಪಡೆದಿರುವ ಮಹಾರಾಷ್ಟ್ರ ಪೊಲೀಸರ ಕ್ರಮದ ವಿರುದ್ಧ ಹರಿಹಾಯ್ದಿದ್ದು, ''ಅರ್ನಬ್ ಬಂಧನ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ'' ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಶಾ ಅವರು, "ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮತ್ತೊಮ್ಮೆ ಪ್ರಜಾಪ್ರಭುತ್ವವನ್ನು ಅಣಕಿಸುವ ಕೆಲಸ ಮಾಡಿವೆ, ರಿಪಬ್ಲಿಕ್ ಸುದ್ದಿ ವಾಹಿನಿ ಮತ್ತು ಅರ್ನಬ್ ಗೋಸ್ವಾಮಿ ವಿರುದ್ಧ ರಾಜ್ಯ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾತಂತ್ರದ ನಾಲ್ಕನೇ ಆಧಾರಸ್ತಂಭದ ಮೇಲೆ ನಡೆದ ದಾಳಿಯಾಗಿದೆ. ಅರ್ನಬ್ ಗೋಸ್ವಾಮಿ ಅವರನ್ನು ವಶಕ್ಕೆ ಪಡೆದಿರುವ ಘಟನೆ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ ಮತ್ತು ಮುಕ್ತ ಮಾಧ್ಯಮಗಳ ಮೇಲಿನ ದಾಳಿಯನ್ನು ವಿರೋಧಿಸಬೇಕಿದೆ" ಎಂದು ಹೇಳಿದ್ದಾರೆ.
2018ರಲ್ಲಿ 53 ವರ್ಷದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ನಾಯಕ್ ಆತ್ಮಹತ್ಯೆ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಬುಧವಾರ ಮುಂಜಾನೆ ಮುಂಬೈ ಪೊಲೀಸರು ಹಠಾತ್ತನೇ ದಾಳಿ ನಡೆಸಿ ಅರ್ನಬ್ನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ನನ್ನ ಮನೆಯವರು ಹಾಗೂ ನನ್ನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಅರ್ನಬ್ ಆರೋಪಿಸಿದ್ದಾರೆ.