ಬೆಂಗಳೂರು, ನ. 04 (DaijiworldNews/MB) : ''ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಬಳಸುವುದರಿಂದ ಬರುವ ಹೊಗೆಯಿಂದಾಗಿ ಕೊರೊನಾ ಸೋಂಕು ಹೆಚ್ಚಳವಾಗುವ ಸಾಧ್ಯತೆಯಿದೆ. ಈ ಬಗ್ಗೆ ವೈದ್ಯಕೀಯ ತಜ್ಞರೇ ಶಂಕೆ ವ್ಯಕ್ತಪಡಿಸಿದ್ದಾರೆ'' ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ''ಪಟಾಕಿ ನಿಷೇಧ ಮಾಡಬೇಕೇ ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಸರ್ಕಾರ ತಜ್ಞರ ಸಮಿತಿ ರಚನೆ ಮಾಡಿದ್ದು ನಾಳೆಯೊಳಗಾಗಿ ಈ ಸಮಿತಿಯು ವರದಿ ನೀಡಲಿದೆ'' ಎಂದು ತಿಳಿಸಿದರು.
ಇನ್ನು ಈ ವೇಳೆ ರಾಜ್ಯದಲ್ಲಿ ಕೊರೊನಾ ನಿರ್ವಹಣೆಯ ಬಗ್ಗೆ ಮಾತನಾಡಿದ ಅವರು, ''ರಾಜ್ಯದಲ್ಲಿ 15,654 ಜನರನ್ನು ಸಮೀಕ್ಷೆ ಮಾಡಲಾಗಿದೆ. ರಾಜ್ಯದಲ್ಲಿ ಸೋಂಕು ಬಂದು ಸಾವನ್ನಪ್ಪಿದವರ ಪ್ರಮಾಣ ಶೇ. 0.05 ಮಾತ್ರಯಿದೆ. ಈಗಾಗಲೇ ಸರಾಸರಿ ಶೇಕಡಾ 16.4 ರಷ್ಟು ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಮಹಾರಾಷ್ಟದಲ್ಲಿಯೂ ಈ ರೀತಿಯ ಸಮೀಕ್ಷೆ ನಡೆಸಲಾಗಿದೆ. ಆದರೆ ಅಲ್ಲಿ ಕೇವಲ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಈ ಸರ್ವೆ ನಡೆಸಲಾಗಿದೆ'' ಎಂದು ಮಾಹಿತಿ ನೀಡಿದರು.
ಹಾಗೆಯೇ ''ಬಳ್ಳಾರಿ ಮತ್ತು ಬೆಂಗಳೂರು ನಗರದಲ್ಲಿ ಸೋಂಕಿರತರ ಸಂಖ್ಯೆ ಅಧಿಕವಾಗಿದ್ದು ಅದರಲ್ಲಿಯೂ ಮುಖ್ಯವಾಗಿ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಶೇ.45 ಹಾಗು ದಕ್ಷಿಣ ವಿಭಾಗದಲ್ಲಿ ಶೇ.39 ರಷ್ಟು ಸೋಂಕಿತರ ಪ್ರಮಾಣವಿದೆ'' ಎಂದು ತಿಳಿಸಿದ್ದಾರೆ.