ನವದೆಹಲಿ, ನ. 04 (DaijiworldNews/MB) : ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಬಂಧನವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಖಂಡಿಸಿದ್ದು ಇದು ಪತ್ರಿಕೋದ್ಯಮದ ಮೇಲಿನ ದಾಳಿ ಎಂದು ಹೇಳಿದ್ದಾರೆ.
2018ರಲ್ಲಿ 53 ವರ್ಷದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ನಾಯಕ್ ಆತ್ಮಹತ್ಯೆ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಬುಧವಾರ ಮುಂಜಾನೆ ಮುಂಬೈ ಪೊಲೀಸರು ಹಠಾತ್ತನೇ ದಾಳಿ ನಡೆಸಿ ಅರ್ನಬ್ನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ನನ್ನ ಮನೆಯವರು ಹಾಗೂ ನನ್ನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಅರ್ನಬ್ ಆರೋಪಿಸಿದ್ದಾರೆ.
ಈ ಬಗ್ಗೆ ಖಂಡನೆ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ''ಮುಂಬೈನಲ್ಲಿ ಪತ್ರಿಕೋದ್ಯಮದ ಮೇಲಿನ ದಾಳಿ ಖಂಡನೀಯ. ಮಹಾರಾಷ್ಟ್ರ ಸರ್ಕಾರದ ಈ ಕ್ರಮ ತುರ್ತು ಪರಿಸ್ಥಿತಿಯಂತೆಯೇ ಭಾಸವಾಗುತ್ತಿದೆ. ನಾವು ಅದನ್ನು ಖಂಡಿಸುತ್ತೇವೆ'' ಎಂದು ಹೇಳಿದ್ದಾರೆ.
''ಮಹಾರಾಷ್ಟ್ರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ನ ಫ್ಯಾಸಿಸ್ಟ್ ಮತ್ತು ತುರ್ತುಪರಿಸ್ಥಿತಿಯನ್ನು ನಾವು ಖಂಡಿಸುತ್ತೇವೆ'' ಎಂದಿದ್ದಾರೆ.
''ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಕೆಲಸ ಮಾಡುವ ಕಾಂಗ್ರೆಸ್ ಇನ್ನೂ ಕೂಡಾ ತುರ್ತು ಪರಿಸ್ಥಿತಿಯ ಮನಸ್ಥಿತಿಯಲ್ಲಿದೆ. ಇದಕ್ಕೆ ಪುರಾವೆಯನ್ನು ಇಂದು ಅವರ ಸರ್ಕಾರ ಮಹಾರಾಷ್ಟ್ರದಲ್ಲಿ ತೋರಿಸಿದೆ. ಜನರು ಇದಕ್ಕೆ ಪ್ರಜಾಪ್ರಭುತ್ವದ ಮೂಲಕ ಉತ್ತರ ನೀಡುತ್ತಾರೆ'' ಎಂದು ಹೇಳಿದ್ದಾರೆ.