ಹೊಸದಿಲ್ಲಿ, ನ. 04 (DaijiworldNews/HR): ಇಂದು ಗುಜರಾತ್ನ ಜಾಮ್ನಗರ ವಾಯುನೆಲೆಗೆ ಎರಡನೇ ಕಂತಿನ ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ನಿಂದ ಆಗಮಿಸಲಿದ್ದು, ವಾಯುಪಡೆಯು ಅಂಬಾಲಾದಲ್ಲಿ ಮೊಟ್ಟಮೊದಲ ರಫೇಲ್ ಸ್ಕ್ವಾಡರ್ನ್ ಸ್ಥಾಪನೆಗೆ ಸಿದ್ಧತೆ ನಡೆಸಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಬರುವ ಮೂರು ರಫೇಲ್ ವಿಮಾನಗಳ ಪ್ರಯಾಣದ ವೇಳೆಯೇ ಫ್ರಾನ್ಸ್ ಹಾಗೂ ಭಾರತೀಯ ಟ್ಯಾಂಕರ್ಗಳು ವಿಮಾನಗಳಿಗೆ ಇಂಧನ ಭರ್ತಿ ಮಾಡಲಿದ್ದು, ಎಲ್ಲಿಯೂ ನಿಲುಗಡೆ ಇರುವುದಿಲ್ಲ. ಹಾಗಾಗಿ ಜಾಮ್ನಗರದಲ್ಲಿ ಒಂದು ದಿನ ನಿಲುಗಡೆಯಾಗಿ ಆ ನಂತರ ಅಂಬಾಲಾ ವಾಯುನೆಲೆಗೆ ನ. 5ರಂದು ತಲುಪುವ ನಿರೀಕ್ಷೆ ಇದೆ ಎಂಬುದಾಗಿ ಅಧಿಕಾರಿ ಹೇಳಿದ್ದಾರೆ.
ಇನ್ನು ಮುಂದಿನ ಎರಡು ತಿಂಗಳಲ್ಲಿ ಮತ್ತೆ 3-4 ರಫೇಲ್ ವಿಮಾನಗಳು ಭಾರತಕ್ಕೆ ಆಗಮಿಸಲಿದ್ದು, ಈ ವರ್ಷಾಂತ್ಯದ ಸಮಯದಲ್ಲಿ ಎಲ್ಲ 36 ವಿಮಾನಗಳು ವಾಯುಪಡೆಯನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ.
ಭಾರತೀಯ ವಾಯುಪಡೆಯ ದಾಳಿ ಸಾಮರ್ಥ್ಯವನ್ನು ರಫೇಲ್ ಯುದ್ಧವಿಮಾನಗಳು ಗಣನೀಯವಾಗಿ ಹೆಚ್ಚಿಸಲಿವೆ ಎಂದು ತಿಳಿದು ಬಂದಿದೆ.