ಹೈದರಾಬಾದ್, ನ. 04 (DaijiworldNews/MB) : ಪತ್ನಿಗೆ ದೊರೆಯುವ 2,250ರೂ. ಪಿಂಚಣಿ ವಿಚಾರದಲ್ಲಿ ಪತ್ನಿಯನ್ನು 92ರ ವೃದ್ಧ ಪತಿ ವಾಕಿಂಗ್ ಸ್ಟಿಕ್ನಿಂದ ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಅಮೃತಲೂರು ಬ್ಲಾಕ್ನ ಯಲವರ್ರು ಗ್ರಾಮದಲ್ಲಿ ನಡೆದಿದೆ.
ಆರೋಪಿ ವೃದ್ಧನನ್ನು ಎಂ. ಸ್ಯಾಮ್ಯುಯೆಲ್ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ಅಪ್ರಾಯಮ್ಮ(90)ನನ್ನು ಹತ್ಯೆಗೈದಿದ್ದು ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಆಂಧ್ರ ಸರ್ಕಾರದ ನಿಯಮದ ಪ್ರಕಾರವಾಗಿ, ಪ್ರತಿ ಕುಟುಂಬದ ಒಬ್ಬ ಹಿರಿಯ ಸದಸ್ಯನಿಗೆ 2,250 ರೂ. ಪಿಂಚಣಿ ದೊರೆಯುತ್ತದೆ. ಈ ಕಾರಣದಿಂದಾಗಿ ಸ್ಯಾಮ್ಯುಯೆಲ್ನ ಪತ್ನಿಗೆ ಪ್ರತಿ ತಿಂಗಳ ಮೊದಲ ವಾರದಲ್ಲಿ ಪಿಂಚಣಿ ಹಣ ದೊರೆಯುತ್ತಿತ್ತು. ಈ ಹಣದ ವಿಚಾರವಾಗಿಯೇ ದಂಪತಿಗಳ ನಡುವೆ ಕಳಹ ಉಂಟಾಗಿದ್ದು ಈ ವಿಚಾರವಾಗಿ ಅವರು ಕಾನೂನುಬದ್ಧವಾಗಿ ವಿಚ್ಛೇಧನೆ ನೀಡದೆಯೇ ೧೦ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಸ್ಯಾಮ್ಯುಯೆಲ್ ನವೆಂಬರ್ 1ರಂದು ಪಿಂಚಣಿಯಲ್ಲಿ ತನ್ನ ಪಾಲನ್ನು ಕೇಳಲೆಂದು ಅಪ್ರಾಯಮ್ಮನನ್ನು ಭೇಟಿಯಾಗಿದ್ದು ಈ ವೇಳೆ ಪಿಂಚಣಿ ಹಣ ಕಡಿಮೆ ಕೊಟ್ಟಿದ್ದಾರೆ ಎಂದು ಸ್ಯಾಮ್ಯುಯೆಲ್ ಕ್ರೋಧಗೊಂಡು ಜಗಳವಾಡಿ ಹೋಗಿದ್ದ. ಬಳಿಕ ಮರುದಿನ ಮುಂಜಾನೆಯೇ ಅಪ್ರಾಯಮ್ಮನ ಮನೆಗೆ ಬಂದು ವಾಕಿಂಗ್ ಸ್ಟಿಕ್ನಿಂದ ಅಪ್ರಾಯಮ್ಮನನ್ನು ಹೊಡೆದು ಹತ್ಯೆಗೈದಿದ್ದಾನೆ. ಅಷ್ಟೇ ಅಲ್ಲದೇ ಪತ್ನಿ ಸಾವನ್ನಪ್ಪಿದ ಬಳಿಕ ತನ್ನ ಮಕ್ಕಳು, ಮೊಮ್ಮಕ್ಕಳಿಗೆ ತಾನು ಪತ್ನಿಯನ್ನು ಕೊಂದಿರುವ ವಿಚಾರವನ್ನು ತಿಳಿಸಿದ್ದಾರೆ.
ಸ್ಥಳಕ್ಕೆ ಕೂಡಲೇ ದಾವಿಸಿದ ಅಪ್ರಾಯಮ್ಮ ಕುಟುಂಬಸ್ಥರು, ಸ್ಯಾಮ್ಯುಯೆಲ್ ವಿರುದ್ಧ ದೂರು ದಾಖಲಿಸಿದ್ದು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಸ್ತುತ ಆರೋಪಿ ವೃದ್ದ ಪತಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾನೆ.