ಮಥುರಾ, ನ. 04 (DaijiworldNews/MB) : ಈದ್ಗಾ ಮೈದಾನದಲ್ಲಿ ಹನುಮಾನ್ ಚಾಲೀಸಾ ಪಠಿಸಿದ ನಾಲ್ವರು ಯುವಕರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತರನ್ನು ಸೌರಬ್ ನಂಬಾರ್ದಾರ್, ರಾಘವ್ ಮಿತ್ತಲ್, ರೌಕಿ ಮತ್ತು ಖನ್ನಾ ಎಂದು ಗುರುತಿಸಲಾಗಿದ್ದು ಅವರನ್ನು ಗೋವರ್ಧನ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಮುಂದೆ ವಿಚಾರಣೆಗೆ ಹಾಜರು ಪಡಿಸಲಾಗಿದ್ದು ತಲಾ 2 ಲಕ್ಷ ಶ್ಯೂರಿಟಿ ಮೇರೆಗೆ ಅವರನ್ನು ಬಿಡುಗಡೆ ಮಾಡಲು ನ್ಯಾಯಾಧೀಶರು ಆದೇಶಿಸಿದ್ದಾರೆ
ಈ ಹಿಂದೆ ಮಥುರಾದ ದೇವಾಲಯವೊಂದರಲ್ಲಿ ಮುಸ್ಲಿಮರು ನಮಾಜ್ ಮಾಡಿದ್ದು ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ. ಬಂಧಿತರ ಪೈಕಿ ಓರ್ವ ತಾನು ಬಿಜೆಪಿಯ ಯುವ ಘಟಕದ ಸ್ಥಳೀಯ ಮುಖಂಡ ಎಂದು ಹೇಳಿಕೊಂಡಿದ್ದಾನೆ.
''ಗೋವರ್ಧನ್-ಬರ್ಸಾನ್ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿದ ಈ ಯುವಕರು ಹನುಮಾನ್ ಚಾಲೀಸಾ ಪಠಿಸಿದ್ದಾರೆ. ಈ ಮೂಲಕ ಪ್ರದೇಶದಲ್ಲಿ ಕೋಮು ಶಾಂತಿಗೆ ಧಕ್ಕೆ ತರುವ ಯತ್ನ ಮಾಡಿದ್ದಾರೆ'' ಎಂದು ಪೊಲೀಸರು ತಿಳಿಸಿದ್ದಾರೆ.