ಕಟಿಹಾರ್, ನ. 03 (DaijiworldNews/MB) : ''ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಹಾರವನ್ನು ಲೂಟಿ ಮಾಡಿರುವುದು ಬಿಹಾರದ ಯುವಕರಿಗೆ ತಿಳಿದಿದೆ'' ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಕಿಡಿಕಾರಿದ್ದಾರೆ.
ಚುನಾವಣಾ ಪ್ರಚಾರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ''ಲಾಕ್ಡೌನ್ ಸಂದರ್ಭದಲ್ಲಿ ಜನರು ತಮ್ಮ ಊರಿಗೆ ತಲುಪಲು ಸಂಚಾರ ವ್ಯವಸ್ಥೆ ಇಲ್ಲದೇ ಸಾವಿರಾರು ಕಿ.ಮೀ ನಡೆದುಕೊಂಡು ಬಂದಾಗ ಮೋದಿಯಾಗಲಿ, ನಿತೀಶ್ ಆಗಲಿ ಏನನ್ನೂ ಮಾಡಿಲ್ಲ. ಆದರೆ ನಾವು ವಲಸೆ ಕಾರ್ಮಿಕರಿಗಾಗಿ ಬಸ್ಸಿನ ವ್ಯವಸ್ಥೆ ಮಾಡಿದೆವು. ಅಧಿಕಾರದಲ್ಲಿ ಇದ್ದಿದ್ದರೆ ಇನ್ನೂ ಹೆಚ್ಚು ಸಹಾಯ ಮಾಡಲು ಸಾಧ್ಯವಾಗುತ್ತಿತ್ತು'' ಎಂದು ಹೇಳಿದರು.
ಹಾಗೆಯೇ ನೋಟು ಅಮಾನ್ಯೀಕರಣ, ವಲಸೆ ಬಿಕ್ಕಟ್ಟು, ಜಿಎಸ್ಟಿ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ನಿರ್ವಹಣೆ ಮತ್ತು ಮೂರು ಹೊಸ ಕೃಷಿ ಕಾನೂನುಗಳ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ದ ವಾಕ್ ಪ್ರಹಾರ ನಡೆಸಿದರು.
''ಪ್ರಧಾನಿ ಮೋದಿಯವರು ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ ಈಗ ನಾನು ಇಲ್ಲಿರುವ ಯುವಕರನ್ನು ಕೇಳಲು ಬಯಸುತ್ತೇನೆ, ಉದ್ಯೋಗಗಳು ಎಲ್ಲಿವೆ?'' ಎಂದು ಪ್ರಶ್ನಿಸಿದರು.